Advertisement

ಲಾಕ್‌ಡೌನ್‌ ಎಫೆಕ್ಟ್; ವ್ಯಸನಿಗಳ ಜೇಬಿಗೆ ಕತ್ತರಿ

03:23 PM Apr 29, 2020 | Naveen |

ಚಿಕ್ಕಮಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರ ಲಾಕ್‌ಡೌನ್‌ ವಿಧಿಸಿದೆ, ಒಮ್ಮೆಲೇ ಎಲ್ಲವನ್ನೂ ಬಂದ್‌ ಮಾಡಿದ್ದರಿಂದ ಅನೇಕರು ಕಷ್ಟಕ್ಕೆ ಗುರಿಯಾಗಿದ್ದು ಒಂದು ಕಡೆಯಾದರೆ ಮತ್ತೂಂದು ಕಡೆ ವ್ಯಸನಿಗಳ ಜೇಬಿಗೆ ಪದೇ ಪದೇ ಕತ್ತರಿ ಬಿಳುತ್ತಿದೆ.

Advertisement

ಲಾಕ್‌ಡೌನ್‌ ವಿಧಿಸಿ 36 ದಿನಗಳು ಕಳೆದಿವೆ. ಇದುವರೆಗೂ ಜಿಲ್ಲಾದ್ಯಂತ 15 ಕಳ್ಳಭಟ್ಟಿ ತಯಾರಿಕೆ ಮತ್ತು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ. ಆಲ್ದೂರು ಭಾಗದಲ್ಲಿ ಆರು, ಕಡೂರು ನಾಲ್ಕು, ಚಿಕ್ಕಮಗಳೂರು ನಗರ ಒಂದು, ಬಣಕಲ್‌ ಒಂದು, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು, ಮೂಡಿಗೆರೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಮದ್ಯದಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದ ಒಂದು ಪ್ರಕರಣ ದಾಖಲಾಗಿದೆ.

ಮದ್ಯದಂಗಡಿ ಬಾಗಿಲು ಹಾಕಿದ್ದರಿಂದ ಮದ್ಯಪ್ರಿಯರಿಗೆ ನಿರಾಸೆಯುಂಟು ಮಾಡಿತು. ಕೆಲವರು ಮಾನಸಿಕ ಖನ್ನತೆಗೆ ಒಳಗಾಗಿ ವೈದ್ಯರಿಂದ ಚಿಕಿತ್ಸೆ ಪಡೆದ ಘಟನೆಗಳು ನಡೆದವು. ಇನ್ನೂ ಕೆಲವರು ದುಬಾರಿ ಬೆಲೆಯಿಂದ ಮದ್ಯದ ಸಹವಾಸವೇ ಬೇಡವೆಂದು ದೂರ ಸರಿದಿದ್ದಾರೆ. ತಲೆ ಎತ್ತಿದ ಕಳ್ಳಭಟ್ಟಿ ದಂಧೆ: ಯಾವಾಗ ಲಾಕ್‌ ಡೌನ್‌ನಿಂದ ಮದ್ಯದಂಗಡಿಗಳು ಬಾಗಿಲು
ಮುಚ್ಚಿದವೋ ಇಡೀ ಜಿಲ್ಲಾದ್ಯಂತ ಕಳ್ಳಭಟ್ಟಿ ದಂಧೆ ತಲೆಎತ್ತಿ ನಿಲ್ಲಲ್ಲು ಶುರುವಿಟ್ಟುಕೊಂಡಿದೆ. ಎಲ್ಲೋ ಅಲ್ಲೋ ಇಲ್ಲೋ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆ ಎಗ್ಗಿಲ್ಲದೇ ನಡೆಯಲು ಆರಂಭಿಸಿದೆ. 30ರೂ. ಗೆ ಮಾರಾಟವಾಗುತ್ತಿದ್ದ ಕ್ವಾರ್ಟರ್‌ ಕಳ್ಳಭಟ್ಟಿ ಡಿಮ್ಯಾಂಡ್‌ ಜಾಸ್ತಿ ಆಗುತ್ತಿದ್ದಂತೆ ರೂ.60, 150 ರೂ ವರೆಗೂ ಏರಿಕೆ ಕಂಡಿದೆ.

ಸಾಮಾನ್ಯ ಬೆಲೆಯ ಎಣ್ಣೆಯೂ ಗಗನಕ್ಕೆ: ಕೇವಲ ಒಂದು ವರ್ಗದ ಜನರಿಗೆ ಸೀಮಿತವಾಗಿದ್ದ ಚೀಪರ್‌ ಹೆಸರು ಪಡೆದಿರುವ ಸಾರಾಯಿ ಕೂಡ ಲಾಕ್‌ಡೌನ್‌ ನಂತರ ತನ್ನ ಉಗ್ರ ಪ್ರತಾಪ ತಾಳಿದೆ. ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಎಣ್ಣೆ 300, 400 ರೂ.ಗಳ ಗಡಿ ದಾಟಿದೆ. ಹೈ ಫೈವ್‌ ಎಣ್ಣೆಗೆ ದಾಸರಾದವರು ಕೂಡ ಚೀಪರ್‌ ಮದ್ಯ ಕುಡಿಯುವಂತಾಗಿದೆ.

ವೈನ್‌ ಮೋರೆಹೋದ ವ್ಯಸನಿಗಳು: ಸಾರಾಯಿ ಬೆಲೆ ಗಗನಕ್ಕೇರುತ್ತಿದ್ದಂತೆ ಕೆಲವರು ವೈನ್‌ಗೆ ಮೋರೆ ಹೋದರು. ವೈನ್‌ಗೂ (ಹಣ್ಣಿನ ರಸ) ಬೇಡಿಕೆ ಹೆಚ್ಚಾಗಿದ್ದು, ಕೆಲವರು ಮನೆಯಲ್ಲೇ ತಯಾರಿಸಿಟ್ಟುಕೊಂಡಿದ್ದರೆ ಮತ್ತೆ ಕೆಲವರು ಲೀಟರ್‌ ಗೆ 250 ರೂ ನೀಡಿ ಖರೀದಿಸಿ ಸೇವಿಸುತ್ತಿದ್ದಾರೆ. ಸ್ವಲ್ಪ ಕೊಳೆತ ಹಣ್ಣಿನ ರಸವನ್ನು ಬಾಟಲಿ ತುಂಬಿ ವೈನ್‌ ಹೆಸರಿನಲ್ಲಿ ಮಾರಾಟ ಮಾಡಿ ವ್ಯಸನಿಗಳ ಜೇಬಿಗೆ ಕತ್ತಿರಿ ಹಾಕುತ್ತಿದ್ದಾರೆ.

Advertisement

ದುಬಾರಿ ಆಯ್ತು ಗುಟ್ಕಾ, ಸಿಗರೇಟು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಆದೇಶ ಹೊರಡಿಸಿದ್ದಾರೆ. ಆದರೆ, ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅಂಗಡಿ ಮಾಲೀಕರು ಮಾತ್ರ ಎಗ್ಗಿಲ್ಲದೇ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ತಂಬಾಕು ಉತ್ಪನ್ನಗಳನ್ನು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಸಿಗರೇಟ್‌ ಬೆಲೆ ಮೂಲ ಬೆಲೆಗಿಂತ ಮೂರುಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗುಟ್ಕಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಸೋಂಕು ತಡೆಗಟ್ಟಲು ಸರ್ಕಾರ ಲಾಕ್‌ ಡೌನ್‌ ವಿಧಿಸಿದೆ. ಈ ಸಂದರ್ಭವನ್ನೇ ದುರ್ಲಾಭ ಪಡೆಯಲು ಮುಂದಾಗಿರುವ ಕಾಳಸಂತೆಕೋರರು ಮಾತ್ರ ಗ್ರಾಹಕನ ಜೇಬಿಗೆ ಕತ್ತರಿ ಹಾಕಲು ಮುಂದಾಗುವುದರೊಂದಿಗೆ ಸಂದರ್ಭದ ಲಾಭ ಪಡೆಯುತ್ತಿರುವುದು ದುರಂತವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next