ಚಿಕ್ಕಮಗಳೂರು: ಕೊರೊನಾ ಸೋಂಕಿನ ವಿರುದ್ಧ ಇಡೀ ದೇಶವೇ ಒಂದಾಗಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಒಂದು ಸಮುದಾಯದ ಕೆಲ ಕಿಡಿಗೇಡಿಗಳು ಆರೋಗ್ಯ ಇಲಾಖೆ ಸಿಬ್ಬಂದಿ , ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಬುಧವಾರ ನಗರದ ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಲ್ಲಿ ನಗರದ ನಿವಾಸಿಗಳಿಗೆ ದಾನಿಗಳು ನೀಡಿದ ಆಹಾರ ಕಿಟ್‌ಗಳನ್ನು ವಿತರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಯಾವ ಮಾನಸಿಕತೆಯಿಂದ ಹಲ್ಲೆ ನಡೆಸುತ್ತಿದ್ದಾರೋ ಅರ್ಥವಾಗುತ್ತಿಲ್ಲ, ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮೇಲಿನ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಸಾರಾಯಿಪಾಳ್ಯ, ಮೈಸೂರು, ಸಂಜಯ್‌ನಗರ, ಸಾದಿಖ್ ಬಡಾವಣೆ, ಪಾದರಾಯಪುರ, ಹುಬ್ಬಳ್ಳಿ ಹಾಗೂ ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾದವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಿಡಿಗೇಡಿಗಳು ನಡೆದ ಘಟನೆಗೆ ಇಡೀ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ಸಮುದಾಯದವರು ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದರು.
ನಗರದ ಉಪ್ಪಳ್ಳಿಯಲ್ಲಿ ಪೌರ ಕಾರ್ಮಿಕ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜ್ಯದ ಅನೇಕ ಕಡೆ ಹಲ್ಲೆ ಪ್ರಕರಣ ನಡೆದಿದ್ದು, ಕಾಕತಾಳೀಯವಾಗಿಯೋ, ಪೂರ್ವ ನಿಯೋಜಿತವೋ, ಸಮುದಾಯದ ದುರ್ದೈವವೋ ಅರ್ಥವಾಗುತ್ತಿಲ್ಲ ಈ ಹಲ್ಲೆ ಘಟನೆಗಳ ಬಗ್ಗೆ ಸಮಗ್ರ ತನಿಖೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುತ್ತಿರುವವರ ವಿರುದ್ಧ ಕೇರಳ ಮತ್ತು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿ ರಕ್ಷಣೆ ನೀಡಲಿದೆ. ಹಲ್ಲೆ ಮಾಡಿದವರಿಗೆ ಭಾರೀ ದಂಡ ಮತ್ತು ಅವರ ಆಸ್ತಿ ಮುಟ್ಟುಗೋಲು ಹಾಕಿ ಎರಡು ವರ್ಷ ಜೈಲು ಶಿಕ್ಷೆ ನೀಡುವ ಸುಗ್ರೀವಾಜ್ಞೆ ಬುಧವಾರ ಸಂಜೆಯೊಳಗೆ ಹೊರಬೀಳಲಿದೆ ಎಂದರು.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಕೊರೊನಾ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಿದ ಎಲ್ಲಾ ಸಿಬ್ಬಂ ದಿಗಳನ್ನೂ ಶ್ಲಾಘಿಸಿದ ಸಚಿವ ಸಿ.ಟಿ. ರವಿ, ಕೇಂದ್ರ ಸರ್ಕಾರ ಲಾಕ್ ಡೌನ್‌ಗೆ ಸಂಬಂದಿಸಿ ಕೆಲ ವಿನಾಯಿತಿಗಳನ್ನು ಘೋಷಿಸಿದೆ. ಜಿಲ್ಲೆಯೂ ಕೊರೊನಾ ಮುಕ್ತವಾಗಿದ್ದು ಲಾಕ್‌ಡೌನ್ ಸಡಿಲಿಕೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಗುರುವಾರ ಲಾಕ್‌ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ 17 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿಲ್ಲದವರನ್ನೂ ಗುರುತಿಸಿ ಆಹಾರದ ಕಿಟ್ ವಿತರಿಸಲಾಗಿದೆ.
ಸಿ.ಟಿ. ರವಿ,
ಜಿಲ್ಲಾ ಉಸ್ತುವಾರಿ ಸಚಿವ