Advertisement

ಉತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

01:34 PM Feb 12, 2020 | Naveen |

ಚಿಕ್ಕಮಗಳೂರು: ಜಿಲ್ಲಾ ಉತ್ಸವಕ್ಕೆ ಗ್ರಾಮೀಣ ಪ್ರದೇಶದ ಸ್ಥಳೀಯ ಕಲಾವಿದರನ್ನು ಕರೆತರಲು ಉಚಿತ ಬಸ್‌ ಸೌಲಭ್ಯ ಒದಗಿಸುವಂತೆ ಸಚಿವ ಸಿ.ಟಿ. ರವಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರಿಗೆ ಸೂಚಿಸಿದರು.

Advertisement

ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉತ್ಸವವನ್ನು ಅರ್ಥಪೂರ್ಣ ಮತ್ತು ಆಕರ್ಷಣೀಯವಾಗಿ ಆಚರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಅಧ್ಯಕ್ಷಕರು, ಉಪಾಧ್ಯಕ್ಷರು ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಶೃಂಗೇರಿ ಶಿವಣ್ಣ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಅನೇಕ ಗ್ರಾಮೀಣ ಕಲಾವಿದರಿದ್ದಾರೆ. ಆದರೆ, ಅವರಿಗೆ ಸೂಕ್ತ ವೇದಿಕೆ ಸಿಗದೆ ಎಲೆಮರೆ ಕಾಯಿಯಂತೆ ಮರೆಯಾಗಿದ್ದಾರೆ. ಅಂತಹ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಬೇಕು. ಮಲೆನಾಡು ಭಾಗದಲ್ಲಿರುವ ಅನೇಕ ಕಲಾವಿದರು ಕೂಲಿ ಕೆಲಸ ಮಾಡುವಂತವರಾಗಿದ್ದು, ದೂರದ ಜಿಲ್ಲಾ ಕೇಂದ್ರಕ್ಕೆ ಬರಲು ಸಮಸ್ಯೆ ಆಗಬಹುದು. ಆದ್ದರಿಂದ ಬಸ್‌ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಸಚಿವ ಸಿ.ಟಿ.ರವಿ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಜನರನ್ನು ಕರೆತರಲು ಉಚಿತ ಬಸ್‌ ವ್ಯವಸ್ಥೆ ಮಾಡಲು ಕಷ್ಟವಾಗಬಹುದು ಆದರೆ, ಗ್ರಾಮೀಣ ಪ್ರದೇಶದ ಕಲಾವಿದರನ್ನು ಕರೆತರಲು ಉಚಿತ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ರಾಜ್ಯದಲ್ಲಿ ನಡೆಯುವ ಜಾನಪದ ಉತ್ಸವದಲ್ಲಿ ಪಾಲ್ಗೊಳ್ಳುವ ಉತ್ತಮ ತಂಡವನ್ನು ಕಳಿಸಿಕೊಡುವಂತೆ ಅಧಿಕಾರಿಗಳಿಗೆ ಮತ್ತು ಸಂಘಟನಾ ಸಮಿತಿಗೆ ವಿನಂತಿ ಮಾಡಿಕೊಂಡಿದ್ದೇನೆ ಎಂದ ಅವರು, ಜಿಲ್ಲೆಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮವನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಯಶಸ್ವಿ ಉತ್ಸವಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಭಾಗಿತ್ವ ಬಹಳ ಮುಖ್ಯವಾಗಿದ್ದು, ತಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು.

Advertisement

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಿಲ್ಲೆಯ ಸಂಭವಿಸಿದ ಅತಿವೃಷ್ಟಿ, ಅನಾವೃಷ್ಟಿ ರಾಜಕೀಯ ಜಂಜಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಅವರಲ್ಲಿ ಒಂದಿಷ್ಟು ಮನರಂಜನೆಯ ಮೂಲಕ ಜೀವನ ಉತ್ಸಾಹ ತುಂಬುವ ಕೆಲಸವಾಗುತ್ತಿದೆ ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಜಿಲ್ಲೆಯ ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಲೆ, ಸಂಸ್ಕೃತಿಯಲ್ಲಿ ಅನೇಕ ವೆವಿಧ್ಯತೆಯನ್ನು ಹೊಂದಿದ್ದು ಅವರ ಕಲೆ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಬೇಕು ಎಂದ ಅವರು, ಗ್ರಾಮೀಣ ಪ್ರದೇಶದ ಮಹಿಳಾ ಸಂಘ ಸಂಸ್ಥೆಗಳು ತಯಾರಿಸುವ ತಿನಿಸುಗಳ ಮಳಿಗೆ ತೆರೆಯಲು ಹೆಚ್ಚಿನ ಅವಕಾಶ ನೀಡಿದಾಗ ಜಿಲ್ಲೆಯ ವೈಶಿಷ್ಟ್ಯ ಪರಿಚಯವಾಗುತ್ತದೇ ಹಾಗೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತದೇ ಎಂದರು.

ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ನಮ್ಮೂರು ಹುಡುಗರು, ಬೆಳವಾಡಿ ವಾಟ್ಸ್ ಆ್ಯಪ್‌ ಗ್ರೂಪ್‌ ಸದಸ್ಯರು ಬಹಳಷ್ಟು ಸಹಕಾರ ನೀಡಿದ್ದಾರೆ. ಜಿಲ್ಲಾ ಉತ್ಸವದಲ್ಲಿ ಅಧಿಕಾರಿಗಳೊಂದಿಗೆ ಅವರು ಕೈ ಜೋಡಿಸಿದರೇ ಉತ್ಸವದ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಮಂಜುನಾಥ ಜೋಶಿ ಮಾತನಾಡಿ, ಉತ್ಸವದಲ್ಲಿ ಹೆಲಿಟೂರಿಸ್‌ಂಗೆ ವ್ಯವಸ್ಥೆ ಕಲ್ಪಿಸುವುದರಿಂದ ಉತ್ಸವ ಇನ್ನಷ್ಟು ಆಕರ್ಷಣೀಯವಾಗಿರುತ್ತೇ. ರಾಜ್ಯದ ಬೇರೆ ಬೇರೆ ಉತ್ಸವಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಬಗ್ಗೆ ಚಿಂತಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.

ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಮಾತನಾಡಿ, ಸಂಸ್ಥೆಯವರು ಆರು ಲಕ್ಷ ರೂ. ಮುಂಗಡ ಠೇವಣಿ ಹಣ ಇಡುವಂತೆ ಹೇಳಿದ್ದಾರೆ. ಅದಕ್ಕೆ ಸಮ್ಮತಿಸಿದ್ದೇವೆ. ಸಂಸ್ಥೆಯ ತಂಡ ಬಂದು ಪರಿಶೀಲನೆ ನಡೆಸಿದ್ದಾರೆ.

ಎರಡು ಹೆಲಿಕಾಪ್ಟರ್‌ ಲಭ್ಯವಿದೆ. ಒಬ್ಬ ವ್ಯಕ್ತಿಗೆ 20 ನಿಮಿಷದ ಒಂದು ಸುತ್ತಿಗೆ 3,300 ರೂ. ಶುಲ್ಕ ಪಾವತಿಸಬೇಕಾಗುತ್ತದೇ ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.

ಸಖರಾಯಪಟ್ಟಣದ ಆನಂದ್‌ ಮಾತನಾಡಿ, ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಗಣ್ಯವ್ಯಕ್ತಿಗಳ, ಪ್ರಸಿದ್ಧ ಸ್ಥಳಗಳ ಮತ್ತು ಪುಣ್ಯಕ್ಷೇತ್ರಗಳ ಸ್ತಬ್ಧಚಿತ್ರ ಪ್ರದರ್ಶನ ಏರ್ಪಡಿಸುವುದರಿಂದ ಜಿಲ್ಲೆಯ ವೈಶಿಷ್ಟ್ಯವನ್ನು ಹೆಚ್ಚು ತಿಳಿಸಿಕೊಟ್ಟಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಮಾತನಾಡಿ, ಒಳ್ಳೆಯ ಕೆಲಸ ಮಾಡುವಾಗ ಟೀಕೆ, ಟಿಪ್ಪಣಿಗಳು ಸಹಜ. ಅದಕ್ಕೆ ಹೆಚ್ಚಿನ ಗಮನ ಕೊಡದೇ ಇಂತಹ ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಹೊಸ ಹುರುಪು ತುಂಬಬೇಕು. ಒಳ್ಳೆಯ ಕಾರ್ಯಕ್ರಮ ನೀಡುವುದು ನಮ್ಮ ಆದ್ಯತೆಯಾಗಬೇಕು. ಮಲೆನಾಡಿನ ಸಾಂಸ್ಕೃತಿಕ ವೈಭವ ಕಳೆದು ಹೋಗಿದೆ. ಆದ್ದರಿಂದ ಸ್ಥಳೀಯ ಕಲಾವಿದರಿಗೆ ಒಂದು ದಿನ ಮೀಸಲಿರಿಸಬೇಕು ಎಂದರು.

ಸಚಿವ ಸಿ.ಟಿ.ರವಿ ಮಾತನಾಡಿ, ಉತ್ಸವದಲ್ಲಿ ಸ್ಥಳೀಯ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಜನರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಯಶಸ್ವಿ ಉತ್ಸವ ನಡೆಯುವಂತೆ ಎಲ್ಲರೂ ಜವಬ್ದಾರಿ ವಹಿಸಬೇಕು ಎಂದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಪೂವಿತ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಡಾ| ರಮೇಶ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next