Advertisement

ಗಮನ ಸೆಳೆದ ಕೆಸರು ಗದ್ದೆ ಓಟ-ಮ್ಯೂಸಿಕಲ್‌ ಚೇರ್‌

03:32 PM Feb 24, 2020 | Naveen |

ಚಿಕ್ಕಮಗಳೂರು: ಕೆಸರು ಗದ್ದೆಯಲ್ಲಿ ನಾ ಮುಂದು ತಾ ಮುಂದು ಎಂದು ಓಡುತ್ತಿದ್ದ ಸ್ಪರ್ಧಿಗಳು, ಮುಗಿಲೆತ್ತರದಲ್ಲಿ ಬಣ್ಣ ಬಣ್ಣದ ಚಿತ್ತಾರ ಬರೆದ ಗಾಳಿಪಟ, ಚುಕ್ಕಿ ಚಿತ್ತಾರದ ರಂಗೋಲಿ, ಮ್ಯೂಸಿಕಲ್‌ ಚೇರ್‌..ಗೆಲುವಿಗಾಗಿ ಪೈಪೋಟಿ… ನಗರದಲ್ಲಿ ನಡೆದ ಕ್ರೀಡಾ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.

Advertisement

ಭಾನುವಾರ ಜಿಲ್ಲಾ ಉತ್ಸವದ ಅಂಗವಾಗಿ ಕ್ರೀಡಾ ಉತ್ಸವಕ್ಕೆ ಚಾಲನೆ ದೊರೆತಿದ್ದು, ಕೆಸರುಗದ್ದೆ ಓಟ, ಗಾಳಿಪಟ ಹಾರಿಸುವುದು, ಮ್ಯೂಸಿಕಲ್‌ ಚೇರ್‌, ಹಗ್ಗಜಗ್ಗಾಟ ಕೆಸರಿನಲ್ಲಿ ನಿಧಿ  ಹುಡುಕುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚೆಸ್‌ ಸ್ಪರ್ಧೆಗಳಲ್ಲಿ ಸಾರ್ವಜನಿಕರು ಸಡಗರದಿಂದ ಭಾಗವಹಿಸುವ ಮೂಲಕ ಹಬ್ಬದ ಕಳೆ ತಂದರು.

ಗ್ರಾಮೀಣ ಕ್ರೀಡೆಯಾದ ಕೆಸರುಗದ್ದೆ ಓಟ ನೋಡಲು ಬಲು ಮಜಾ ಆದರೆ, ಓಡಿದವರಿಗೆ ಗೊತ್ತು ಅದರ ಕಷ್ಟವೇನು ಅಂತ ಕೆಸರುಗದ್ದೆ ಓಟಕ್ಕಾಗಿಯೇ ನಿರಂತರ ಅಭ್ಯಾಸ ಮಾಡುವವರು ಇದ್ದಾರೆ. ಆದರೆ ಅಭ್ಯಾಸವಿಲ್ಲದೇ ಓಡಿದರೇ ಹೇಗಿರುತ್ತೇ ಅನ್ನೊಂದು ಕ್ರೀಡಾ ಉತ್ಸವದ ಅಂಗವಾಗಿ ನಲ್ಲೂರುಗೇಟ್‌ ಬಳಿ ನಡೆದ ಕೆಸರುಗದ್ದೆ ಓಟ ಸಾಕ್ಷಿಯಾಯಿತು.

ಕೆಸರುಗದ್ದೆ ಓಟದ ಸ್ಪರ್ಧೆಗೆ ಚಾಲನೆ ದೊರಕುತ್ತಿದ್ದಂತೆ ಸ್ಪರ್ಧಿಗಳು ಅತ್ಯಂತ ಉತ್ಸಹದಿಂದ ಪಾಲ್ಗೊಂಡರು. ಕೆಸರುಗದ್ದೆ ಓಟಕ್ಕೆ ಚಾಲನೆ ನೀಡಿದ ಸಚಿವ ಸಿ.ಟಿ.ರವಿ ಜನಪ್ರತಿನಿಧಿಗಳ ತಂಡದೊಂದಿಗೆ ಕೆಸರುಗದ್ದೆಗಳಿದರು. ಪ್ರಾರಂಭದಲ್ಲಿ ಶರವೇಗದಲ್ಲಿ ಓಡಿದ ಸಚಿವರು ಇನ್ನೇನು ಗುರಿಮುಟ್ಟಬೇಕು ಎನ್ನುವಷ್ಟರಲ್ಲಿ ಮೂರು ಬಾರಿ ಮುಗ್ಗರಿಸಿ ಬಿದ್ದರು. ಬಿದ್ದರು ಕೂಡ ಛಲಬಿಡದೇ ಓಡಿ ಗುರಿಮುಟ್ಟುವಲ್ಲಿ ಯಶಸ್ವಿಯಾದರು.

ಸಚಿವರು ಅಂಕಣಕ್ಕೆ ಇಳಿಯುತ್ತಿದ್ದಂತೆ ನೆರೆದಿದ್ದ ಜನರು ಸಚಿವರು ಓಡುವಂತೆ ಹುರಿದುಂಬಿಸಿದರು. ಹದಿಹರೆಯದ ಯುವಕ ಯುವತಿಯರು, ಮಕ್ಕಳು ಮಹಿಳೆಯರು, ಪುರುಷರನ್ನು ತಂಡೋಪ ತಂಡವಾಗಿ ಕೆಸರುಗದ್ದೆ ಓಟಕ್ಕೆ ಬಿಡಲಾಗುತ್ತಿತ್ತು. ಓಡಲು ಶುರುವಿಟ್ಟುಕೊಳ್ಳುತ್ತಿದ್ದಂತೆ ನೆರೆದಿದ್ದ ಜನರು ಸೀಟಿ ಹಾಕುತ್ತಾ ಕೇಕೇ ಹೊಡೆಯುತ್ತ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದರು.

Advertisement

ಗುರಿಮುಟ್ಟಲೇಬೇಕೆಂದು ಶರವೇಗದಲ್ಲಿ ಓಡುತ್ತಿದ್ದ ಸ್ಪರ್ಧಿಗಳು ಅಲ್ಲಲ್ಲಿ ದೊಪ್ಪೆಂದು ಬಿಳುತ್ತಿದ್ದಂತೆ ನೆರೆದಿದ್ದ ಜನರ ಕೇಕೇ ಇನಷ್ಟು ಜೋರಾಗುತ್ತಿತ್ತು.

ಹಗ್ಗ ಜಗ್ಗಿದ ಜಟ್ಟಿಗಳು: ನೆಲ್ಲೂರು ಗೇಟ್‌ ಬಳಿ ಕೆಸರುಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿತ್ತು. ಭಾಗವಹಿಸಿದ್ದ ಸ್ಪರ್ಧಿಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಕೆಸರು ಗದ್ದೆ ಓಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಿದರು.

ಗಾಳಿಪಟ ಪ್ರದರ್ಶನ: ಗಾಳಿಪಟ ಹಾರಿಸೋದು ಅಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದಕ್ಕೆ ಅವಕಾಶ ಸಿಕ್ರೇ ಬಿಡ್ತಾರ…. ಜಿಲ್ಲಾ ಉತ್ಸವದ ಅಂಗವಾಗಿ ಭಾನುವಾರ ನಡೆದ ಕ್ರೀಡಾ ಉತ್ಸವದಲ್ಲಿ ನಗರದ ಸ್ಟೇಡಿಯಂನಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು ಗಾಳಿಪಟವನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಖುಷಿಪಟ್ಟರು.

ಚಿತ್ತಾರದ ರಂಗೋಲಿ: ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಬಣ್ಣ ಬಣ್ಣದಿಂದ ತುಂಬಿದ ವಿವಿಧ ರೀತಿಯ ರಂಗೋಲಿ ಬಿಡಿಸುವಲ್ಲಿ ಮಹಿಳೆರು ಮತ್ತು ವಿದ್ಯಾರ್ಥಿನಿಯರು ಮುಗ್ನರಾಗಿದ್ದರು. ಮಹಿಳೆಯರು, ವಿದ್ಯಾರ್ಥಿನಿಯರು ಚಂದ ಚಂದದ ರಂಗೋಲಿಗಳನ್ನು ಬಿಡಿಸುತ್ತಿದ್ದರೇ ನೆರೆದಿದ್ದ ಜನರು ರಂಗೋಲಿ ನೋಡಿ ಆನಂದಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next