Advertisement

ಜಿಲ್ಲಾ ಉತ್ಸವದಲ್ಲಿ ಆಹಾರ ಮೇಳ

12:58 PM Feb 19, 2020 | Naveen |

ಚಿಕ್ಕಮಗಳೂರು: ಫೆ.28 ರಿಂದ ಮಾ.1ರ ವರೆಗೆ ನಡೆಯಲಿರುವ ಜಿಲ್ಲಾ ಉತ್ಸವ (ಹಬ್ಬ)ದ ಅಂಗವಾಗಿ ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿ ಹಾಗೂ ಆಹಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅರಣ್ಯ ಇಲಾಖೆ ಕಚೇರಿ ರಸ್ತೆಯಿಂದ ಜಿಲ್ಲಾ ಪ್ರವಾಸಿ ಮಂದಿರದವರೆಗೂ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ದಕ್ಷಣ ಭಾರತೀಯ ದೇಸಿ ಸೊಗಡಿನ ವಿಭಿನ್ನ ಖಾದ್ಯಗಳ ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಆಹಾರ ಮೇಳದಲ್ಲಿ ಸಸ್ಯಾಹಾರಿ, ಮಾಂಸಾಹಾರಿ, ಚಾಟ್ಸ್‌, ಐಸ್‌ಕ್ರೀಂ, ಜ್ಯೂಸ್‌ ಸೆಂಟರ್‌ಗಳ ಪ್ರತ್ಯೇಕ ಜೋನ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ನೂರಕ್ಕೂ ಹೆಚ್ಚು ಮಳಿಗೆ ತೆರೆಯಲಾಗುವುದು. ಮೇಳದಲ್ಲಿ ಮಹಿಳೆಯರಿಗೆ ಪಾನಿಪುರಿ ತಿನ್ನುವ ಮತ್ತು ಪುರುಷರಿಗೆ ಪಡ್ಡು ತಿನ್ನುವ ಸ್ಪರ್ಧೆ ಆಯೋಜಿಸಿದ್ದು, ಉತ್ತಮ ಸಾಧನೆ ತೋರಿದ ಪುರುಷರಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಅತ್ಯುತ್ತಮ ಮತ್ತು ಗುಣಾತ್ಮಕ ಆಹಾರ ತಿನಿಸು ತಯಾರಿಸುವ ಪುರುಷರಿಗೆ ಚಿಕ್ಕಮಗಳೂರು ನಳಪಾಕ ಮತ್ತು ಮಹಿಳೆಯರಿಗೆ ಚಿಕ್ಕಮಗಳೂರು ಅಡುಗೆ ಪ್ರವೀಣೆ ಎಂದು ಬಿರುದಿನೊಂದಿಗೆ ಪ್ರಶಸ್ತಿ ನೀಡಲಾಗುವುದು. ಮೇಳದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇ ಸಲಾಗಿದ್ದು, ಸ್ವಚ್ಛತೆ, ಗುಣಾತ್ಮಕ, ವೈವಿದ್ಯತೆಯ ಆಹಾರ ಪದ್ಧತಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದರು.

ಉತ್ಸವದಲ್ಲಿ ಆಹಾರ ಮೇಳವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಚಿಂತನೆ ನಡೆಸಿದ್ದು, ನಗರದ ಎಂ.ಜಿ. ರಸ್ತೆಯಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಿ ವೈವಿದ್ಯಮಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತೊಗಲು ಗೊಂಬೆ, ಅಂಟಿಕೆ ಪಿಂಟಿಕೆ, ಗೊಂಬೆ ಕುಣಿತ, ಕುದುರೆ ಕುಣಿತ, ದೊಂಬರಾಟ, ಹಗಲು ವೇಷ, ಬುರಾಕಥ್‌, ಲಂಬಾಣಿ ಕುಣಿತ, ದುರಗಮುರಗಿ, ಹಕ್ಕಿಪಿಕ್ಕಿ ನೃತ್ಯ, ಇಳಕಲ್‌ನ ಗರ್ಗ್ ಗಮ್ಮತ್‌, ಡೊಳ್ಳು ಕುಣಿತ, ಮರಗಾಲು ಕುಣಿತ, ಹಾವೇರಿ ಜಿಲ್ಲೆಯ ತಂಡದಿಂದ ಮಲ್ಲಕಂಬ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ಕಲಾ ಪ್ರದರ್ಶನದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕಡೂರು, ಶೃಂಗೇರಿ, ಮೂಡಿಗೆರೆ, ಅಜ್ಜಂಪುರ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದಿಂದ 30 ತಂಡಗಳು ಭಾಗವಹಿಸಲಿವೆ. ಕಲಾ ಪ್ರದರ್ಶನ ನೋಡಲು ಅನುಕೂಲವಾಗುವಂತೆ ಎಲ್‌ ಇಡಿ ಪರದೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ನಾಗರಾಜ್‌, ಸಮಿತಿ ಸದಸ್ಯರಾದ ವರಸಿದ್ಧಿ ವೇಣುಗೋಪಾಲ್‌, ಪುಷ್ಪರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next