Advertisement

ಕಾಫಿ ನಾಡಲ್ಲಿ ಮತ್ತೆ 23 ಮಂದಿಗೆ ಕೋವಿಡ್

12:57 PM Jul 09, 2020 | Naveen |

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕೋವಿಡ್ ಕರಾಳ ಕಣ್ಣು ತೆರೆದಿದ್ದು ಬರೋಬ್ಬರಿ 23 ಮಂದಿಯಲ್ಲಿ ಸೋಂಕಿರುವುದು ಬುಧವಾರ ದೃಢಪಟ್ಟಿದೆ. ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.

Advertisement

ಬುಧವಾರ ದೃಢಪಟ್ಟ ಸೋಂಕಿತರಲ್ಲಿ ಚಿಕ್ಕಮಗಳೂರು ತಾಲೂಕಿಗೆ ಸೇರಿದ 12 ಜನರು, ಕೊಪ್ಪ ತಾಲೂಕಿನಲ್ಲಿ ಒಬ್ಬರು, ನರಸಿಂಹರಾಜಪುರ ತಾಲೂಕಿನಲ್ಲಿ ಒಬ್ಬರು, ಅಜ್ಜಂಪುರ ತಾಲೂಕಿನಲ್ಲಿ ಒಬ್ಬರು ಹಾಗೂ ಕಡೂರು ತಾಲೂಕಿನಲ್ಲಿ 8 ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ನಗರದ ಕೋಟೆ, ಹೊಸಮನೆ, ಉಪ್ಪಳ್ಳಿ, ಕಲ್ಯಾಣ ನಗರ ಬಡಾವಣೆಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ದೋಣಿಕಣದಲ್ಲಿ 7 ಪ್ರಕರಣ ಪತ್ತೆಯಾಗಿದ್ದು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಒಂದು ಪ್ರಕರಣ ಸೇರಿದಂತೆ ಚಿಕ್ಕಮಗಳೂರು ತಾಲೂಕಿನಲ್ಲಿ 12 ಪ್ರಕರಣಗಳು ಕಂಡು ಬಂದಿವೆ.

ಕಡೂರು ಪಟ್ಟಣದ ಫ್ಯಾನ್ಸಿ ಸ್ಟೋರ್‌ ಮಾಲೀಕರೊಬ್ಬರಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಪತ್ನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಗ ಹಾಗೂ ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ಪ್ರಕರಣವೊಂದರಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಂಬಂಧಿಕರಾದ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದ ತಾಯಿ- ಮಗನಿಗೆ ಸೋಂಕು ದೃಢಪಟ್ಟಿದೆ ಹಾಗೂ ಪಂಚನಹಳ್ಳಿಯ ನಾರಾಯಣಗೌಡ ಕೊಪ್ಪಲು ಗ್ರಾಮದ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ 8 ಪ್ರಕರಣಗಳು ಪತ್ತೆಯಾಗಿವೆ.

ನರಸಿಂಹರಾಜಪುರ ತಾಲೂಕಿನ ಮೆಣಸೂರಿನಲ್ಲಿ ಒರ್ವ ವ್ಯಕ್ತಿ, ಕೊಪ್ಪ ತಾಲೂಕಿನ ಹುಲ್ಮಗಿ ಗ್ರಾಮದಲ್ಲಿ ಓರ್ವ ವ್ಯಕ್ತಿ ಹಾಗೂ ಅಜ್ಜಂಪುರ ಪಟ್ಟಣ ಅಂಬೇಡ್ಕರ್‌ ಬಡಾವಣೆಯಲ್ಲಿ ಒರ್ವ ವ್ಯಕ್ತಿಗೆ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲೆಯ ಕೋವಿಡ್‌ -19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ವಾಸವಿದ್ದ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ಕಂಟೈನ್‌ಮೆಂಟ್‌ ಝೋನ್‌ಗಳಾಗಿ ಗುರುತಿಸಲಾಗಿದೆ. ಬುಧವಾರ ಪತ್ತೆಯಾದ 23 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 123ಕ್ಕೇರಿದೆ. 54 ಪ್ರಕರಣಗಳು ಸಕ್ರಿಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next