Advertisement

ಚಿಕ್ಕಮಗಳೂರು ಅಭಿವೃದ್ಧಿಗೆ ಆದ್ಯತೆ

01:30 PM May 10, 2020 | Naveen |

ಚಿಕ್ಕಮಗಳೂರು: ಕೋವಿಡ್‌-19 ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಕೋವಿಡ್‌-19 ನಿಯಂತ್ರಣಕ್ಕೆ ಬಂದ ಬಳಿಕ ಆದ್ಯತೆ ಮೇರೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

Advertisement

ನಗರದ ಜಿ.ಪಂ ಸಂಭಾಗಣದಲ್ಲಿ ಪ್ರಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಮಸ್ಯೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಇದುವರೆಗೂ ಕಂಡು ಬರದ ಹಿನ್ನೆಲೆಯಲ್ಲಿ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದು ಸಮಾಧಾನಕರ ವಿಚಾರ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕೆಲವು ಆರ್ಥಿಕ ತಜ್ಞರು ಇಡೀ ವಿಶ್ವದಾದ್ಯಂತ ಶೇ.30ರಷ್ಟು ಉದ್ಯೋಗ ಕಡಿತಗೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ. ಆರ್ಥಿಕತೆಯ ಚೇತರಿಕೆಗೆ ವರ್ಷಗಳೇ ಬೇಕಾಗಿದ್ದು, ಜಿಡಿಪಿ ಶೂನ್ಯಕ್ಕೆ ಇಳಿಯುವ ಆಂತಕ ಹೊರಹಾಕಿದ್ದು, ಇಂತಹ ಕಠೊರ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಮೂರನೇ ಹಂತದ ಲಾಕ್‌ಡೌನ್‌ಗೆ ಸರ್ಕಾರ ಒಂದಷ್ಟು ಸಡಿಲಿಕೆ ನೀಡಿದೆ. ಸಡಿಲಿಕೆ ನೀಡಿದೆ ಎಂದ ಮಾತ್ರಕ್ಕೆ ಲಾಕ್‌ಡೌನ್‌ ಸಂಪೂರ್ಣ ತೆಗೆದು ಹಾಕಿಲ್ಲ, ಕೋವಿಡ್ ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುವ ಅನಿವಾರ್ಯವಿದ್ದು, ಜನರು ಜಾಗೃತಿ ವಹಿಸಬೇಕು. ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಕಳ್ಳಮಾರ್ಗದಲ್ಲಿ ಬರುವರ ಸಂಖ್ಯೆ ಜಾಸ್ತಿಯಾಗಿದೆ ಎಂಬ ದೂರು ಬರುತ್ತಿವೆ. ಅನ್ಯ ಮಾರ್ಗದಲ್ಲಿ ಬಂದವರಿಂದ ಸೋಂಕು ಜಿಲ್ಲೆಯನ್ನು ಪ್ರವೇಶಿಸಿದರೇ ನಿಯಂತ್ರಣ ಕಠಿಣವಾಗಲಿದ್ದು, ಜಿಲ್ಲೆಯನ್ನು ಹಸಿರು ವಲಯದಲ್ಲೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮಗಳ ಮೇಲಿದೆ. ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಲಾಕ್‌ಡೌನ್‌ ಸಡಿಲಿಕೆ ನಂತರ ಜನಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶೇ.100 ರಷ್ಟು ಸರ್ಕಾರದ ಆದೇಶ ಪಾಲಿಸಿಕೊಂಡು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೋವಿಡ್  ಸೋಂಕು ತಡೆಗಟ್ಟಲು ಸಾಧ್ಯವಿದ್ದು, ಜನರು ಸರ್ಕಾರದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿದ್ದು, ಕೋವಿಡ್ ಸಂದರ್ಭ ಅವರೆಲ್ಲ ವಿದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ. ಇಂತಹ ಪ್ರತಿಭೆಗಳಿಗೆ ದೇಶದಲ್ಲೇ ಅವಕಾಶ ಕಲ್ಪಿಸುವ ಚಿಂತನೆ ಸರ್ಕಾರ ಮುಂದಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಟಿ.ರವಿ ಸರ್ಕಾರ ಇದುವರೆಗೂ ಜೀವದ ಬಗ್ಗೆ ಯೋಚಿಸಿದೆ. ಜೀವನದ ಬಗ್ಗೆ ಯೋಚನೆ ಮಾಡಿಲ್ಲ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಜೀವ ಉಳಿಸಲು ಮುಂದಾಗಿದೆ. ನಂತರ ಜೀವನ ಕಟ್ಟಿಕೊಳ್ಳಬೇಕಿದೆ. ಅನೇಕ ಕಂಪನಿಗಳು ಭಾರತಕ್ಕೆ ಬರಲು ಉತ್ಸಾಹ ತೋರುತ್ತಿವೆ. ಹೊಸ ಕಂಪನಿಗಳು ದೇಶಕ್ಕೆ ಬಂದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಭಾರತ ಸ್ವಾವಲಂಬಿಯಾಗಲು ಇದು ಒಳ್ಳೆಯ ಅವಕಾಶ ಎಂದರು.

ಕೋವಿಡ್ ನಿಯಂತ್ರಣ ಸಂಬಂಧ ಕೆಲವೊಂದು ಇಲಾಖೆ ಅ ಧಿಕಾರಿಗಳನ್ನು ತೊಡಗಿಸಿಕೊಂಡಿಲ್ಲ, ಸರ್ಕಾರದ ಯೋಜನೆಗಳ ದುರುಪಯೋಗದ ದೂರು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಕೊರೊನಾ ನಿಯಂತ್ರಣಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 48 ಸಮಿತಿ ರಚಿಸಲಾಗಿದೆ. ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಕೆಲವೊಂದು ಇಲಾಖೆಗೆ ಹೆಚ್ಚಿನ ಹೊರೆ ಆಗಿಲ್ಲ. ಕೋವಿಡ್ ಸೋಂಕು ಪ್ರಕರಣ ಕಂಡು ಬಂದರೆ ತಡೆಗಟ್ಟುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದರು.

Advertisement

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್‌ಗಳಿವೆ. ಖಾಸಗಿ ಸೇರಿದಂತೆ ಜಿಲ್ಲಾದ್ಯಂತ 9 ವೆಂಟಿಲೇಟರ್‌ ಸೌಲಭ್ಯವಿದೆ. 40,272 ಕಾರ್ಮಿಕರಿದ್ದು, 30,657 ಜನರಿಗೆ 2 ಸಾವಿರ ರೂ. ಸಹಾಯಧನ ನೀಡಲಾಗಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1,11,051 ರೈತರ ಖಾತೆಗೆ ಹಣ ಸಂದಾಯ ಮಾಡಲಾಗಿದೆ. 1,4,583 ಜನ್‌ಧನ್‌ ಖಾತೆಗೆ ಹಣ ಸಂದಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ತಿಂಗಳ ಅಂತ್ಯದಲ್ಲಿ ಜಿಲ್ಲೆಯಲ್ಲೂ ಕೊರೊನಾ ಪರೀಕ್ಷಾ ಕೇಂದ್ರ ತೆರೆಯುವುದಾಗಿ ಸಚಿವ ಸಿ.ಟಿ.ರವಿ ತಿಳಿಸಿದರು. ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ಲಾನ್‌ ಚೇಂಜ್‌ ಮಾಡಿದ್ದಾರೆ ಹಾಗೂ ಪರಿಹಾರ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಂಟ್ರ್ಯಾಕ್ಟರ್‌ ಪ್ಲಾನ್‌ ಚೇಂಜ್‌ ಮಾಡಲು ಸಾಧ್ಯವಿಲ್ಲ, ಬದಲಾವಣೆಗೆ ಕೇಳಿಕೊಳ್ಳಲು ಅವಕಾಶವಿದೆ ಎಂದರು.

ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕರಾದ ಬೆಳ್ಳಿಪ್ರಕಾಶ್‌, ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ಎಸ್‌.ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹರೀಶ್‌ ಪಾಂಡೆ, ಪ್ರಸ್‌ಕ್ಲಬ್‌ ಅಧ್ಯಕ್ಷ ಆರಗ ರವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next