Advertisement

ಮನಸೊಂದು ಮಾನಸ ಸರೋವರ

05:43 PM Jan 09, 2020 | Naveen |

ಚಿಕ್ಕಮಗಳೂರು: ಮನಸ್ಸೊಂದು ಮಾನಸ ಸರೋವರ. ಅದು ಸದಾ ತಿಳಿಯಾಗಿರಬೇಕು. ಕಲುಷಿತಗೊಳ್ಳಬಾರದೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Advertisement

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್‌ ಸಭಾಂಗಣದಲ್ಲಿ ಬುಧವಾರ ಎಸ್‌.ಎಸ್‌.ಎಲ್‌ .ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನಸ ಸರೋವರದ ಶುದ್ಧ ನೀರಿನಂತೆ ಮನುಷ್ಯ ದೇಹದಲ್ಲಿರುವ ಮಾನಸ ಸರೋವರ ಸಹ ಶುದ್ಧವಾಗಿರಬೇಕು. ಅದಕ್ಕೆ ರೂಪ, ರಸ, ಗಂಧ, ಶಬ್ಧ, ಸ್ಪರ್ಶದಿಂದ ಕೊಳಕು ಒಳಸೇರಿದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ಒಳ್ಳೆಯದನ್ನು ನೋಡುವ, ಸ್ಪರ್ಶಿಸುವ, ಕೇಳುವ, ಆಘ್ರಾಣಿಸುವ ಗುಣವನ್ನು ವಿದ್ಯಾರ್ಥಿ ದಿಸೆಯಲ್ಲೆ ಅಭ್ಯಾಸ ಮಾಡಿಕೊಂಡರೆ ಶುದ್ಧ ಮನಸ್ಸನ್ನು ಹೊಂದಿ ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇವರು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡಾಗ ಮಾತ್ರ ಯಶಸ್ಸನ್ನು ಕಾಣಬಹುದು. ಹೊಗಳಿಸಿಕೊಳ್ಳಲು ಸಹ ನಾವು ಶಕ್ತರಾಗಿರಬೇಕು. ಆ ಶಕ್ತಿ ಬರುವುದು ಶುದ್ಧ ಮನಸ್ಸಿನ ಸಾಧನೆಯಿಂದ ಎಂದು ತಿಳಿಸಿದರು. ಗೀತೆಯಲ್ಲಿ ಪರಮಾತ್ಮ ಉದ್ದರೇತ್‌ ಆತ್ಮನಾತ್ಮನಃ ಎನ್ನುತ್ತಾನೆ. ನಮ್ಮ ಉದ್ಧಾರ ನಮ್ಮೊಳಗೆ ಎಂಬ ಅರ್ಥ. ನಮಗೆ ನಾವೆ ಮಿತ್ರ ಮತ್ತು ಶತೃ ಎಂಬುದನ್ನು ಅರಿತು ಮುನ್ನಡೆದಾಗ ಗುರಿ ಮುಟ್ಟಬಹುದೆಂದು ಹೇಳಿದರು.

Advertisement

ಸಂತೋಷವಾಗಿರಲು ಕಾರಣಗಳ ಅವಶ್ಯಕತೆ ಇಲ್ಲ, ಒಂದು ಕಾರಣದಿಂದ ಸಂತೋಷಗೊಂಡರೂ ಅದು ಅತ್ಯಲ್ಪ ಕಾಲವಿರುತ್ತದೆ. ಸದಾ ಸಂತೋಷವಾಗಿ ಶುದ್ಧ ಮನಸ್ಸಿನಿಂದ ಸಾಧನೆಯತ್ತ ಮುಖ ಮಾಡಬೇಕು. ಮನುಷ್ಯ ತನ್ನ ಜೀವನದ ಮೊದಲ 25 ವರ್ಷದೊಳಗೆ ಸ್ಪಷ್ಟ ಗುರಿಯತ್ತ ಸಾಗುವ ತವಕ ಹೊಂದಿರಬೇಕು. ಆ ನಂತರವೂ ಹೊಂದಿರದಿದ್ದರೆ, ಬದುಕಿನ ಕಲಿಕೆಯನ್ನು ಎತ್ತರಿಸಿಕೊಳ್ಳದಿದ್ದರೆ, ಜೀವನದಲ್ಲಿ ಏನನ್ನು ಸಾಧಿಸಲಾಗದು ಎಂದು ವಿವರಿಸಿದರು. ತರಗತಿಯಲ್ಲಿ ಬೋಧನೆಯತ್ತ ಮನಸ್ಸನ್ನು ಕೇಂದ್ರೀಕರಿಸುವುದು ಅಗತ್ಯ. ಇದಕ್ಕೆ ಶುದ್ಧ ಮನಸ್ಸು ಮುಖ್ಯ. ಬಾಹ್ಯ ಸೌಂದರ್ಯದಿಂದ ಮನುಷ್ಯ ಸಮಾಜದಲ್ಲಿ ಮಾನ್ಯನಾಗುವುದಿಲ್ಲ. ಅವನ ಆಂತರಿಕ ಸೌಂದರ್ಯ ಅಂದರೆ ಶ್ರವಣ, ಮನನದಿಂದ ತಲೆಗೆ ಹೋಗಿದ್ದು ಮಾತ್ರ ವ್ಯಕ್ತಿಯನ್ನು ಎತ್ತರಕ್ಕೆ ಬೆಳೆಸುತ್ತದೆ. ಹೊಟ್ಟೆಯೊಳಗೆ ಹೋಗುವ ಆಹಾರ ದೇಹಕ್ಕೆ ಪುಷ್ಠಿ, ತಲೆಗೆ ಹೋಗುವ ವಿಚಾರ ವ್ಯಕ್ತಿತ್ವಕ್ಕೆ ಶಕ್ತಿ ಎಂದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮುಖ್ಯಸ್ಥ ದೇವರಾಜ್‌ ಮಾತನಾಡಿ, ವಿದ್ಯಾರ್ಥಿಗಳು ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ತಂದೆ ತಾಯಿಯಿಂದ ಹಾಗೂ ಶಿಕ್ಷಕರಿಂದ ಮಾರ್ಗದರ್ಶನ ದೊರೆಯಬಹುದೆ ಹೊರತು ಆ ಸವಾಲುಗಳನ್ನು ಎದುರಿಸಬೇಕಾದವರು ವಿದ್ಯಾರ್ಥಿಗಳೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next