ಚಿಕ್ಕಮಗಳೂರು: ಜೂನ್ 1 ಶೈಕ್ಷಣಿಕ ವರ್ಷದ ಪ್ರಾರಂಭದ ದಿನ. ಕೋವಿಡ್ ಕರಿನೆರಳು ಶೈಕ್ಷಣಿಕ ವರ್ಷದ ಪ್ರಾರಂಭ ದಿನದ ಮೇಲೂ ತನ್ನ ಪ್ರಭಾವ ಬೀರಿದೆ. ತಳಿರು ತೋರಣಗಳಿಂದ ಮಧುಮಗಳಂತೆ ಸಿಂಗಾರಗೊಂಡು ನಗುಮೊಗ ದಿಂದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಬೇಕಾಗಿದ್ದ ಶಾಲೆಗಳಿಗೆ ಬೀಗ ಬಿದ್ದಿವೆ.
ಎಲ್ಲವೂ ಎಂದಿನಂತೆ ಇದ್ದಿದ್ದರೆ ಮೇ ತಿಂಗಳ ಅಂತ್ಯದ ವೇಳೆಗೆ ಶಾಲೆಗಳು ಬಾಗಿಲು ತೆರೆದು ಶೈಕ್ಷಣಿಕ ಚಟುವಟಿಕೆಗೆ ಸಿದ್ಧತೆಗಳು ಭರದಿಂದ ಸಾಗಬೇಕಿತ್ತು. ವಿದ್ಯಾರ್ಥಿಗಳ ದಾಖಲಾತಿ, ಪಠ್ಯಪುಸ್ತಕ, ಸೈಕಲ್, ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಅಗತ್ಯ ತಯಾರಿ ನಡೆಸಿಕೊಳ್ಳ ಬೇಕಿತ್ತು. ಆದರೆ, ಕೋವಿಡ್ ಮಾಹಾಮಾರಿ ಶೈಕ್ಷಣಿಕ ಕ್ಷೇತ್ರವನ್ನು ಎಡಬಿಡದೆ ಕಾಡುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ವನ್ನು ಕಿತ್ತುಕೊಂಡಿದೆ.
ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಕಂಡು ಬರುತ್ತಿದ್ದಂತೆ ಇಡೀ ರಾಜ್ಯಾದ್ಯಂತ ಕಳೆದ ಎರಡು ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ನಾಲ್ಕನೇ ಹಂತದ ಲಾಕ್‌ಡೌನ್ ಗೆ ಸಡಲಿಕೆ ನೀಡಿದ್ದು ಸರ್ಕಾರ ಜುಲೈ ತಿಂಗಳಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಸುಳಿವು ನೀಡಿದೆ. ಆದರೆ, ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಜುಲೈ ತಿಂಗಳಿಂದ ಶಾಲೆಗಳು ಆರಂಭವಾಗುತ್ತೋ ಇಲ್ಲವೋ ಎಂಬುದನ್ನು ಕಾದುನೋಡಬೇಕಷ್ಟೇ.
ಕೋವಿಡ್ ರಾಜ್ಯಕ್ಕೆ ಕಾಲಿಡದಿದ್ದರೆ ಜೂ.1ಕ್ಕೆ ಜಿಲ್ಲೆಯ 1,44,828 ವಿದ್ಯಾರ್ಥಿ ಗಳು ತಮ್ಮ ಶೈಕ್ಷಣಿಕ ಜೀವನವನ್ನು ಆರಂಭಿಸಬೇಕಿತ್ತು. ವಿದ್ಯಾರ್ಥಿಗಳ ಸದ್ದುಗದ್ದಲದ ನಡುವೆ ಜಿಲ್ಲೆಯ 1,968 ಶಾಲೆಗಳಲ್ಲಿ ಪಾಠಪ್ರವಚನಗಳು ಪ್ರಾರಂಭಗೊಳ್ಳಬೇಕಿತ್ತು. ಕೊರೊನಾ ಎಲ್ಲಾ ಕ್ಷೇತ್ರಗಳ ಮೇಲು ತನ್ನ ವಕ್ರದೃಷ್ಟಿ ಬೀರಿ, ಶಾಲೆಗಳ ಆರಂಭದ ದಿನವನ್ನೇ ಕಸಿದುಕೊಂಡಿದೆ.
ಪಾಳುಕೊಂಪೆಯಾದ ಶಾಲೆಗಳು: ಕೋವಿಡ್ ಸೋಂಕು ಪ್ರಕರಣಗಳು ಕಂಡು ಬರುತ್ತಿದ್ದಂತೆ ಜಿಲ್ಲೆಯ ಶಾಲೆಗಳಲ್ಲಿ ಪಾಠ ಪ್ರವಚನಗಳನ್ನು ಸ್ಥಗಿತಗೊಳಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು. ಈ ಮಧ್ಯೆ ಬೇಸಿಗೆ ರಜೆ ಇದ್ದಿದ್ದರಿಂದ ಕಳೆದೆರೆಡು ತಿಂಗಳಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿವೆ. ಎಲ್ಲವೂ ಎಂದಿನಂತೆ ಇದ್ದಿದ್ದರೆ ಮೇ 28ರಿಂದ ಶಾಲೆಗಳು ಬಾಗಿಲು ತೆರೆದುಕೊಳ್ಳಬೇಕಾಗಿತ್ತು. ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ವಿದ್ಯಾರ್ಥಿಗಳ ದಾಖಲಾತಿ ನಡೆಸಬೇಕಿತ್ತು. ಕೋವಿಡ್ ಸೋಂಕು ಶೈಕ್ಷಣಿಕ ಕ್ಷೇತ್ರದ ಮೇಲೂ ತನ್ನ ಪ್ರಭಾವ ಬೀರಿದ್ದರಿಂದ ಶಾಲೆಗಳು ಸರಿಯಾದ ಸಮಯಕ್ಕೆ ಪ್ರಾರಂಭವಾಗದೆ ಪಾಳುಕೊಂಪೆಯಾಂತಾಗಿವೆ.
ಕೋವಿಡ್ ಸೋಂಕು ಹಿನ್ನೆಲೆಯಿಂದಾಗಿ ಜೂ. 1ಕ್ಕೆ ಶಾಲೆಗಳು ಬಾಗಿಲು ತೆರೆದುಕೊಳ್ಳುವ ಯಾವ ಲಕ್ಷಣಗಳಿಲ್ಲ. ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಶಾಲೆಗಳ ಆರಂಭದ ಬಗ್ಗೆ ಸುಳಿವು ನೀಡಿದೆಯಷ್ಟೇ. ಹಾಗಾಗಿ, ಜೂ.1ರಂದು ಶಾಲೆಗಳು ಶೃಂಗಾರಗೊಳ್ಳುವ ಭಾಗ್ಯ ಕಳೆದುಕೊಂಡಿವೆ.
ಸಂದೀಪ ಜಿ.ಎನ್, ಶೇಡ್ಗಾರ್