Advertisement

ಭದ್ರೆಯಲ್ಲಿ ವೈಟ್‌ ರಿವರ್‌ ರ್ಯಾಫ್ಟಿಂಗ್‌

06:24 PM Sep 28, 2019 | Team Udayavani |

ಚಿಕ್ಕಮಗಳೂರು: ಸ್ವತಃ ರ್ಯಾಫ್ಟ್‌ ಮಾಡುತ್ತಿದ್ದ ಬಾಲಕರು, ಬಾಲಕಿಯರು. ಮುಖದಲ್ಲಿ ಒಂದೆಡೆ ದುಗುಡ, ಮತ್ತೂಂದೆಡೆ ಸಂತಸ. ರ್ಯಾಫ್ಟ್‌ ಗುಂಡಿಯಲ್ಲಿ ಇಳಿದಾಗ ಚಿಮ್ಮುತ್ತಿದ್ದ ನದಿ ನೀರು. ಇವೆಲ್ಲ ಕಂಡು ಬಂದಿದ್ದು ಮೂಡಿಗೆರೆ ತಾಲೂಕು ಬಾಳೆಹೊಳೆ ಗ್ರಾಮದಲ್ಲಿ ಹರಿಯುತ್ತಿದ್ದ ಭದ್ರಾ ನದಿಯಲ್ಲಿ.

Advertisement

ಶುಕ್ರವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬಾಳೆಹೊಳೆಯ ಭದ್ರಾ ನದಿಯಲ್ಲಿ ಪ್ರವಾಸೋದ್ಯಮ ಇಲಾಖೆ ಸಾರ್ವಜನಿಕರಿಗಾಗಿ ಉಚಿತ ವೈಟ್‌ ರಿವರ್‌ ರ್ಯಾಫ್ಟಿಂಗ್‌ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಒಂದು ರ್ಯಾಫ್ಟ್‌ನಲ್ಲಿ 6 ಜನರನ್ನು ಕೂರಿಸಲಾಗಿತ್ತು. ಅವರೊಟ್ಟಿಗೆ ಮಾರ್ಗದರ್ಶನ ನೀಡಲು ಓರ್ವ ಗೈಡ್‌ ಸಹ ಇದ್ದರು. ರ್ಯಾಫ್ಟ್‌ನಲ್ಲಿ ಕೂರುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಬ್ಬರಿಗೂ ಲೈಫ್‌ ಜಾಕೆಟ್‌, ಹೆಲ್ಮೆಟ್‌ ನೀಡಲಾಗಿತ್ತು. ಯಾವ ರೀತಿ ರ್ಯಾಫ್ಟ್‌ ಮಾಡಬೇಕು. ಗುಂಡಿಗಳು ಬಂದಾಗ ಏನು ಮಾಡಬೇಕು ಎಂಬೆಲ್ಲ ಮಾಹಿತಿಗಳನ್ನು ಮೊದಲೇ
ಪ್ರತಿಯೊಬ್ಬರಿಗೂ ನುರಿತ ರ್ಯಾಫ್ಟರ್‌ಗಳು ನೀಡಿದ್ದರು.

ರ್ಯಾಫ್ಟಿಂಗ್‌ ಆರಂಭವಾಗಿ ಸ್ವಲ್ಪ ದೂರ ತೆರಳಿದ ನಂತರ ಸುಮಾರು 40 ರಿಂದ 50 ಅಡಿ ಆಳ ನೀರಿದ್ದ ಸ್ಥಳದಲ್ಲಿ ಎಲ್ಲರಿಗೂ ನೀರಿಗೆ ಇಳಿಯಲು ಅವಕಾಶ ನೀಡಲಾಯಿತು. ಈಜಲು ಬಾರದಿದ್ದವರು ಮೊದಲು ನೀರಿಗೆ ಇಳಿಯಲು ಹಿಂದೇಟು ಹಾಕಿದರಾದರೂ ನಂತರ ಬೇರೆಯವರು ನೀರಿನಲ್ಲಿ ಇಳಿದಿರುವುದನ್ನು ಕಂಡು ಅವರೂ ಸಹ ಧೈರ್ಯವಾಗಿ ನೀರಿಗಿಳಿದರು.

ನಂತರ ಸ್ವತಃ ರ್ಯಾಫ್ಟ್‌ ಮಾಡಿಕೊಂಡು ಸ್ವಲ್ಪ ದೂರ ತೆರಳಿದ ನಂತರ ನದಿಯಲ್ಲಿ ಗುಂಡಿ ಇದ್ದ ಸ್ಥಳದಲ್ಲಿ ರ್ಯಾಫ್ಟ್‌ ಇಳಿಯುತ್ತಿದ್ದಂತೆ ನೀರು ಮೇಲಕ್ಕೆ ಹಾರಿ ಎಲ್ಲರ ಮೇಲೂ ಬಿದ್ದಿತು. ರ್ಯಾಫ್ಟ್‌ ಗುಂಡಿಗೆ ಇಳಿದ ಕೂಡಲೇ ಎಲ್ಲರ ಮುಖದಲ್ಲೂ ಒಂದೆಡೆ ದುಗುಡ ಕಂಡು ಬಂದಿದ್ದರೆ, ಮತ್ತೆ ಕೆಲವೇ ಕ್ಷಣಗಳಲ್ಲಿ ರೋಮಾಂಚನಗೊಂಡು ಎಲ್ಲರ ಮುಖದಲ್ಲಿಯೂ ಸಂತಸ ಎದ್ದು ಕಾಣುತ್ತಿತ್ತು.

ಸುಮಾರು 3 ಕಿ.ಮೀ. ದೂರ ರ್ಯಾಫ್ಟಿಂಗ್‌ ಮಾಡಲಾಯಿತು. 3 ಕಡೆ ಗುಂಡಿಯಲ್ಲಿ ಇಳಿದು ಮೇಲಕ್ಕೆ ಹತ್ತಲಾಯಿತು. ಈ ಸಾಹಸ ಕ್ರೀಡೆಯಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರವಲ್ಲದೆ, ಸಾರ್ವಜನಿಕರು ಸಹ ಪಾಲ್ಗೊಂಡಿದ್ದರು.

Advertisement

ಒಟ್ಟಾರೆ 50 ಜನರಿಗೆ ಸಾಹಸ ಕ್ರೀಡೆಯಲ್ಲಿ ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ನಮಗೆ ಈಜಲು ಬರುವುದಿಲ್ಲ. ಆದರೂ, ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳೋಣವೆಂದು ಇಲ್ಲಿಗೆ ಬಂದಿದ್ದೆವು. ನದಿಯಲ್ಲಿ ಕೆಲವೆಡೆ 50 ಅಡಿಗೂ ಹೆಚ್ಚು ಆಳವಿದೆ ಎಂಬುದು ತಿಳಿದ ನಂತರ ರ್ಯಾಫ್ಟಿಂಗ್‌ ಮಾಡುವುದು ಬೇಡ. ಬೇರೆಯವರು ಮಾಡುವುದನ್ನು ನೋಡೋಣ ಎಂದುಕೊಂಡಿದ್ದೆ.  ನಂತರ ಧೈರ್ಯ ಮಾಡಿ ರ್ಯಾಫ್ಟಿಂಗ್‌ ಮಾಡಲು ಮುಂದಾದೆ. ಸ್ವಲ್ಪ ದೂರ ತೆರಳಿದ ನಂತರ ಧೈರ್ಯ ಹೆಚ್ಚಾಯಿತು. ಈಜು ಬಾರದಿದ್ದರೂ ನದಿಯಲ್ಲಿ ಇಳಿದಿದ್ದು ಬಹಳ ಸಂತೋಷ ತಂದಿತು. ಗುಂಡಿಯಲ್ಲಿ ಇಳಿದು ಮೇಲೆದ್ದ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎಂಬುದು ಬಹುತೇಕ ವಿದ್ಯಾರ್ಥಿನಿಯರ ಅನಿಸಿಕೆಯಾಗಿತ್ತು.

ಸಾಹಸ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಬಾಳೆಹೊಳೆಯ ಭದ್ರಾ ನದಿಯಲ್ಲಿ 2008ರಲ್ಲಿ ಜಲ ಸಾಹಸ ಕ್ರೀಡೆ ಆರಂಭಿಸಲಾಯಿತು. ಪ್ರತಿವರ್ಷ ಇಲ್ಲಿ ಸಾಹಸ ಕ್ರೀಡೆಯನ್ನು ನಡೆಸಲು ಗುತ್ತಿಗೆ ನೀಡಲಾಗುತ್ತದೆ. ಒಂದು ಬಾರಿಗೆ ಸುಮಾರು 5 ಕಿ.ಮೀ. ರ್ಯಾಫ್ಟಿಂಗ್‌
ಮಾಡಲು ಅವಕಾಶ ನೀಡಲಾಗುತ್ತದೆ. ವಾರಾಂತ್ಯಗಳಲ್ಲಿ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next