ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 80 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.
ತುಂಬಿ ಕೋಡಿ ಬಿದ್ದಿರುವ ಇತಿಹಾಸ ಪ್ರಸಿದ್ಧ ಅಯ್ಯನಕೆರೆಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅಯ್ಯನಕೆರೆ ಸಮಗ್ರ ಅಭಿವೃದ್ಧಿ ಹಾಗೂ ಬೋಟಿಂಗ್ ವ್ಯವಸ್ಥೆಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಕೆರೆಯಲ್ಲಿ ಜಿಟ್ಟಿ ಹಾಗೂ ಬಟ್ಟೆ ಬದಲಿಸುವ ಕೊಠಡಿ ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ಖಾಸಗಿಯವರಿಂದ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು ಟೆಂಡರ್ ಕರೆಯಲಾಗುವುದು ಎಂದರು.
ನಗರದ ಬಸವನಹಳ್ಳಿ ಕೆರೆ ಸಮಗ್ರ ಅಭಿವೃದ್ಧಿಗೆ 10 ಕೋಟಿ, ಕೋಟೆ ಕೆರೆಗೆ 2 ಕೋಟಿ, ಹಿರೇಕೊಳಲೆ ಕೆರೆಗೆ 1.50 ಕೋಟಿ, ಹಿರೇಮಗಳೂರಿಗೆ 3 ಕೋಟಿ, ಸೀತಾಳಯ್ಯನಗಿರಿಗೆ 1, ಮಾಣಿಕ್ಯದಾರಾಕ್ಕೆ 2 ಕೋಟಿ, ದೇವೀರಮ್ಮ ದೇವಾಲಯ ಅಭಿವೃದ್ಧಿಗೆ 4, ಬೋಳರಾಮೇಶ್ವರ ದೇವಾಲಯಕ್ಕೆ 2 ಕೋಟಿ, ಶಕುನಿ ರಂಗನಾಥ ಸ್ವಾಮಿ ದೇವಾಲಯ, ಅಕ್ಕನಾಗಲಾಂಬಿಕಾ ದೇವಿ ಗದ್ದುಗೆ, ಸಿರಿಮನೆ ಫಾಲ್ಸ್, ದುಬಾದುಬಿ ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ 80 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಡೂರು, ಚಿಕ್ಕಮಗಳೂರು ಹಾಗೂ ತರೀಕೆರೆ ತಾಲ್ಲೂಕುಗಳ 167 ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸುವ 1200 ಕೋಟಿ ರೂ.ಗಳ ಪ್ರಸ್ತಾವನೆ ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ಈಗಾಗಲೇ ಈ ಕುರಿತು ಇಲಾಖೆಯಲ್ಲಿ ಚರ್ಚಿಸಲಾಗಿದೆ. ಈ ತಿಂಗಳಲ್ಲಿಯೇ ಮಂಡಳಿಯ ಸಭೆಯಲ್ಲಿ ವಿಚಾರ ಮಂಡಿಸಲಾಗುವುದು. ಅಲ್ಲಿ ಅನುಮೋದನೆ ದೊರೆತ ನಂತರ ಸಚಿವ ಸಂಪುಟ ಸಭೆಗೆ ವಿಷಯ ಬರಲಿದೆ. ಈ ಯೋಜನೆಗೆ ಮಂಜೂರಾತಿ ದೊರೆತಲ್ಲಿ ಸದಾಕಾಲ ಬರಗಾಲಕ್ಕೆ ತುತ್ತಾಗುವ 3 ತಾಲ್ಲೂಕುಗಳ 167 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಕೆರೆಗಳಲ್ಲಿ ಅಯ್ಯನಕೆರೆ ಮತ್ತು ಮದಗದ ಕೆರೆಯನ್ನೂ ಸೇರಿಸಲಾಗಿದೆ ಎಂದು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವು ಅಯ್ಯನಕೆರೆ ತುಂಬಿ ಹರಿಯುತ್ತಿದೆ. ಅದಕ್ಕಾಗಿ ಪೂಜೆ ನೆರವೇರಿಸಲಾಗಿದೆ. ಇದೆ ರೀತಿಯಾಗಿ ಮುಂದಿನ ದಿನಗಳಲ್ಲೂ ಕೆರೆ ಕಟ್ಟೆಗಳು ತುಂಬಿ ಹರಿಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಸ್. ಎಲ್.ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ಜಿಪಂ ಉಪಾಧ್ಯಕ್ಷ ವಿಜಯಕುಮಾರ್, ಸಖರಾಯಪಟ್ಟಣ ಗ್ರಾಪಂ ಅಧ್ಯಕ್ಷ ದಾಕ್ಷಾಯಣಮ್ಮ, ಉಪಾಧ್ಯಕ್ಷ ಶಾಮಲಾಬಾಯಿ ಇತರರು ಉಪಸ್ಥಿತರಿದ್ದರು.