ಚಿಕ್ಕಮಗಳೂರು : ಕೋವಿಡ್ ಸೋಂಕು ಎಲ್ಲರನ್ನೂ ಕಷ್ಟಕ್ಕೆ ದೂಡಿದೆ. ಜೀವ ಮತ್ತು ಜೀವನದ ನಡುವೆ ಹೋರಾಡಬೇಕಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲಾ ಬಂದ್ ಮಾಡಿಕೊಂಡು ಕೂತಿದೆ. ಮನೆಯಿಂದ ಹೋರಬಾರದಂತೆ ನಿರ್ಭಂದಗಳನ್ನು ಹಾಕಿದೆ.
ಹಾಗೇ ಶಾಲಾ ಕಾಲೇಜುಗಳು ಬಾಗಿಲು ಹಾಕಿವೆ. ಹಾಗಾಗೀ ಮಕ್ಕಳು ಶಿಕ್ಷಕರನ್ನು ಮೀಸ್ ಮಾಡ್ಕೋಂಡ್ರೆ ಶಿಕ್ಷಕರು ಮಕ್ಕಳನ್ನು ಮಿಸ್ ಮಾಡ್ಕೋಳ್ತಿದ್ದಾರೆ.
ಮಕ್ಕಳೊಂದಿಗೆ ಮಕ್ಕಳಾಗಿ ಮನಮುಟ್ಟುವಂತೆ ಪಾಠ ಮಾಡ್ತಿದ್ದ ಕೆಲ ಶಿಕ್ಷಕರಿಗೆ ಮಕ್ಕಳದ್ದೇ ಚಿಂತೆ ಅಂದ್ರು ತಪ್ಪಿಲ್ಲ. ದಿನದಿಂದ ದಿನಕ್ಕೆ ಶಾಲೆ ಆರಂಭದ ದಿನ ಮುಂದೋಗ್ತಿದ್ದು ಮಕ್ಕಳನ್ನು ನೆನೆದು ಶಿಕ್ಷಕರು ಮರುಗಿದ್ದಾರೆ.
ಜಿಲ್ಲೆಯ ಶಿಕ್ಷಕಿಯೊಬ್ಬರು ಕೋವಿಡ್ ಕಷ್ಟಕಾಲದಲ್ಲಿ ಮಕ್ಕಳಿಗೆ ಪತ್ರ ಬರೆಯುವ ಮೂಲಕ ಅವರಲ್ಲಿ ಆತ್ಮಥೈರ್ಯ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದು ಮಕ್ಕಳು ಮತ್ತು ಪೋಷಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮನೆಯಲ್ಲಿ ಕೂತು ಮಕ್ಕಳಂತೆ ಪತ್ರ ಬರೆಯುತ್ತಿರೋ ಇವರ ಹೆಸರು ಗೀತಾ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ. ಕೋವಿಡ್ ಕಾಲದಲ್ಲಿ ಎಲ್ಲರೂ ಮನೆಯಲ್ಲೇ ಲಾಕ್ ಆಗಿದ್ದಾರೆ. ಶಾಲೆಗೆ ಹೋಗಲಾರದೆ ಪುಟ್ಟ-ಪುಟ್ಟ ಮಕ್ಕಳು ತಮ್ಮ ಸ್ನೇಹಿತರು, ಅಚ್ಚುಮೆಚ್ಚಿನ ಶಿಕ್ಷಕರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಶಿಕ್ಷಕರೂ ಕೂಡ. ಹಾಗಾಗಿ, ಶಿಕ್ಷಕಿ ಗೀತಾ, ತನ್ನ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರೀತಿಯ ಪತ್ರ ಬರೆದು ಆಶ್ಚರ್ಯ ಮೂಡಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ‘ರಾಜೀನಾಮೆ’ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ರ ಬಿ.ವೈ.ರಾಘವೇಂದ್ರ
ಶಿಕ್ಷಕಿಯ ಪ್ರೀತಿಯ ಪತ್ರವನ್ನು ಮಕ್ಕಳು ಹೆತ್ತವರೆದುರು ಓದಿ ಸಂಭ್ರಮಿಸಿದ್ದಾರೆ. ಪ್ರತಿಯೊಂದು ಮಗುವಿನ ಜೊತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳ ಬುತ್ತಿಯನ್ನ ನೆನಪಿಸಿದ್ದಾರೆ. ಪ್ರತಿಯೊಂದು ಮಗುವಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ. ಮಕ್ಕಳ-ಪೋಷಕರು ಯೋಗಕ್ಷೇಮ ವಿಚಾರಿಸಿ, ಕೋವಿಡ್ ನಿಂದ ಮನೆಯಲ್ಲಿರೋ ಮಕ್ಕಳು-ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿದ್ದಾರೆ. ವರ್ಷದಿಂದ ಶಾಲೆ ಬಾಗಿಲು ಹಾಕಿದ್ರು ತಾವು ಆಗಾಗ ಪಾಠ ಮಾಡಿ ಕಳಿಸುತ್ತಿದ್ದ ವಿಡಿಯೋ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿಕ್ಷಕಿಯ ಪತ್ರ ಓದಿ ಮಕ್ಕಳು ಫುಲ್ ಖುಷಿಯಾಗಿರೋದನ್ನ ಕೇಳಿ ಶಿಕ್ಷಕಿ ಗೀತಾ ಸಂತಸ ಪಟ್ಟಿದ್ದಾರೆ.
ಶಿಕ್ಷಕಿ ಗೀತಾ ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನ ಮಾತ್ರ ವಿಚಾರಿಸದೆ ಕೋವಿಡ್ ಬಗ್ಗೆ ಎಚ್ಚರ ವಹಿಸುವಂತೆಯೂ ಕಿವಿಮಾತು ಹೇಳಿದ್ದಾರೆ. ರಜೆ ಇರೋದ್ರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡೋದಕ್ಕೆ ಹೋಗದಂತೆ ಪತ್ರದಲ್ಲಿ ತಿಳಿ ಹೇಳಿದ್ದಾರೆ. ಜೊತೆಗೆ ಮೊಬೈಲನ್ನೂ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ, ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ಮಕ್ಕಳು ಓಕೆ ಮಿಸ್ ಅಂದಿದ್ದಾರೆ. ಅಲ್ಲದೇ ಮಿಸ್ ಪ್ರೀತಿಯಿಂದ ಬರೆದ ಪತ್ರವನ್ನ ಬೀರುವಿನಲ್ಲಿ ಜೋಪಾನವಾಗಿಟ್ಟಿದ್ದಾರೆ. ಶಿಕ್ಷಕಿ ಗೀತಾಗೂ ಮಕ್ಕಳು ಪ್ರೀತಿಯಿಂದ ಪತ್ರ ಬರೆದು ಖುಷಿ ಪಟ್ಟಿದ್ದಾರೆ. ನಾವೆಲ್ಲಾ ಆರೋಗ್ಯವಾಗಿದ್ದೇವೆ ಮಿಸ್. ನೀವು ಕೂಡ ಕ್ಷೇಮವಾಗಿರಿ ಅಂತ ಮಕ್ಕಳು ಕೂಡ ಶಿಕ್ಷಕಿಗೆ ಪ್ರೀತಿಯ ಪತ್ರ ಬರೆದಿದ್ದಾರೆ. ಮಕ್ಕಳ ಪತ್ರ ಕಂಡು ಶಿಕ್ಷಕಿ ಕೂಡ ಸಂತೋಷಪಟ್ಟಿದ್ದಾರೆ.
ನಾಲ್ಕು ದಿನಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಗೀತಾ ಪತ್ರ ಬರೆಯುತ್ತಿದ್ದು ಪತ್ರ ತಲುಪುತ್ತಿದ್ದಂತೆ ಮಕ್ಕಳು ಶಿಕ್ಷಕಿಗೆ ಪೋನ್ ಮಾಡಿ ಮಾತಾಡಿ ಸಂಭ್ರಮಿಸಿದ್ದಾರೆ. ಶಿಕ್ಷಕಿಯ ಈ ಕಾರ್ಯಕ್ಕೆ ಪೋಷಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಇಂದಿನ ಆಧುನಿಕ ಯುಗದಲ್ಲೂ ಮಕ್ಕಳಲ್ಲಿ ಪತ್ರ ಬರೆಯುವ ಸಂಸ್ಕೃತಿ ಬೆಳೆಸುವ ಮತ್ತು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿರುವ ಶಿಕ್ಷಕಿಯ ಕಾರ್ಯ ಎಲ್ಲ ಶಿಕ್ಷಕ ವರ್ಗದವರಿಗೂ ಸ್ಫೂರ್ತಿಯಾಗಿದೆ.