Advertisement

7ರಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ: ಅಧಿಕಾರಿಗಳ ಸಭೆ

05:33 PM Nov 04, 2019 | Naveen |

ಚಿಕ್ಕಮಗಳೂರು: 2019-20 ನೇ ಸಾಲಿನ 14 ರಿಂದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನ.7 ರಿಂದ 9 ರವರೆಗೆ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ ಅವಶ್ಯಕವಿರುವ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ಒದಗಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಸ್ಪರ್ಧಾರ್ಥಿಗಳು, ತರಬೇತುದಾರರು ಹಾಗೂ ತೀರ್ಪುಗಾರರಿಗೆ ಊಟೋಪಚಾರ, ವಸತಿ, ಸಾರಿಗೆ ಹಾಗೂ ಮತ್ತಿತರ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.

ಕುಸ್ತಿ ಪಂದ್ಯಾವಳಿಗಳು ಸುಗಮವಾಗಿ ನಡೆಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳ ಅಧ್ಯಕ್ಷರು ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಆಹಾರ ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸಿ ಆಹಾರ ನಿರೀಕ್ಷಕರಿಂದ ಪ್ರಮಾಣೀಕರಿಸಿದ ಬಳಿಕ ಸ್ಪರ್ಧಾಳುಗಳಿಗೆ ಆಹಾರ ನೀಡಬೇಕು. ವಸತಿ ಸೌಲಭ್ಯಕ್ಕೆ ನಿಗದಿಪಡಿಸಿದ ವಿದ್ಯಾಸಂಸ್ಥೆಗಳಿಗೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಶಾಲಾ ಮುಖ್ಯೋಪಾಧ್ಯಾಯರದ್ದಾಗಿದೆ ಎಂದು ಹೇಳಿದರು.

ಸ್ಪರ್ಧಾರ್ಥಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೈದಾನದಲ್ಲಿ ಮತ್ತು ಪ್ರತಿ ವಸತಿ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌, ಪ್ರಥಮ ಚಿಕಿತ್ಸೆಯ ಸಾಮಗ್ರಿಗಳು, ತುರ್ತು ಚಿಕಿತ್ಸಾ ಸಾಮಗ್ರಿಗಳು ಹಾಗೂ ಆ್ಯಂಬುಲೆನ್ಸ್‌
ವ್ಯವಸ್ಥೆ ಮಾಡುವ ಹೊಣೆಗಾರಿಕೆ ಆರೋಗ್ಯ ಇಲಾಖೆ ಮೇಲಿದೆ ಎಂದು ತಿಳಿಸಿದರು. ಆಟದ ಮೈದಾನದಲ್ಲಿ, ವಸತಿ ಕೇಂದ್ರದ ಬಳಿ ಟ್ರಾಫಿಕ್‌ ನಿಯಂತ್ರಣ ಹಾಗೂ ಸುರಕ್ಷತೆಯ ಹೊಣೆಯನ್ನು ಪೊಲೀಸ್‌ ಇಲಾಖೆ ಮುತುವರ್ಜಿಯಿಂದ ನಿರ್ವಹಿಸಬೇಕು ಎಂದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎನ್‌. ಜಯಣ್ಣ, ಡಯಟ್‌ ಪ್ರಾಂಶುಪಾಲ ಎನ್‌.ವಿ.ಶಿವಪ್ಪ, ನಗರಸಭೆ ಪೌರಾಯುಕ್ತ ಪರಮೇಶಿ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next