Advertisement

ಶೃಂಗೇರಿ ಶಾಸಕರ ಪುತ್ರಿಯ ಸರಳ ವಿವಾಹ

03:28 PM Mar 15, 2020 | Naveen |

ಚಿಕ್ಕಮಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಭೀತಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಮಗಳ ವಿವಾಹ ಸಮಾರಂಭಕ್ಕೂ ಬಿಸಿ ಮುಟ್ಟಿಸಿದೆ.

Advertisement

ಕೊರೊನಾ ವೈರಸ್‌ ತಡೆಗೆ ರಾಜ್ಯ ಸರ್ಕಾರ ಜನಸಂದಣಿ ಸೇರುವ ಸಮಾರಂಭಗಳಿಗೆ ಬ್ರೇಕ್‌ ಹಾಕಿರುವ ಹಿನ್ನೆಲೆಯಲ್ಲಿ ಶಾಸಕರ ಪುತ್ರಿಯ ವಿವಾಹವನ್ನು ಸರಳವಾಗಿ ನಡೆಸಲು ಎರಡೂ ಕುಟುಂಬಗಳ ಹಿರಿಯರು ಮತ್ತು ಸ್ನೇಹಿತರು ತೀರ್ಮಾನಿಸಿದ್ದಾರೆ.

ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ತಮ್ಮ ಮಗಳು ಡಾ|ಸಂಜನಾ ಮತ್ತು ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‌ ಅವರ ಪುತ್ರ ವಚನ್‌ ಅವರ ವಿವಾಹ ಸಮಾರಂಭ ಮಾ.19ಕ್ಕೆ ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಬೇಕಿತ್ತು. ಆದರೆ, ರಾಜ್ಯದಲ್ಲಿ ಕೊರೊನಾ ವೈರಸ್‌ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಹೆಚ್ಚಿನ ಜನರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಸದೆ ಸರಳವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ವಿವಾಹ ಸಮಾರಂಭಕ್ಕೆ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ಸೇರಿದಂತೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇತ್ತು. ಈಗಾಗಲೇ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಆದರೆ ರಾಜ್ಯ ಸರ್ಕಾರ ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ಮದುವೆ, ಜಾತ್ರೆ, ಸಭೆ, ಸಮಾರಂಭಗಳಂತಹ ಹೆಚ್ಚು ಜನ ಸೇರುವ ಸಮಾರಂಭಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡುವಂತೆ ಆದೇಶ ನೀಡಿದೆ. ಹಾಗಾಗಿ, ಸಮುದಾಯ ಭವನದ ಬದಲಿಗೆ ಖಾಂಡ್ಯಾ ಹೋಬಳಿಯಲ್ಲಿರುವ ಬಾಸಾಪುರ ಎಸ್ಟೇಟ್‌ ನ ಮನೆಯಲ್ಲಿಯೇ ವಧು ಮತ್ತು ವರನ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸರಳ ವಿವಾಹ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಮಾ.18ರಂದು ಬುಧವಾರ ವಿವಾಹದ ದೇವತಾ ಕಾರ್ಯ ಹಾಗೂ ಮಾ.19ರಂದು ಗುರುವಾರ ವಿವಾಹ ಕಾರ್ಯಕ್ರಮ ಸರಳವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

Advertisement

ವರನ ತಂದೆ ಅತ್ತಿಕಟ್ಟೆ ಜಗನ್ನಾಥ್‌ ಮಾತನಾಡಿ, ಮಾ.21 ರಂದು ಚಿಕ್ಕಮಗಳೂರು ಕ್ಲಬ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಆರಕ್ಷತೆಯನ್ನೂ ಮುಂದೂಡಲಾಗಿದೆ. ವಿವಾಹಕ್ಕೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಮಾರಕ ರೋಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದರಂತೆ ಸರಳ ವಿವಾಹಕ್ಕೆ ಎರಡೂ ಕುಟುಂಬಗಳು ಮಾತುಕತೆ ನಡೆಸಿ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜೇಗೌಡರ ಆಪ್ತರಾದ ಎಸ್‌.ವಿ.ಮಂಜುನಾಥ್‌, ಶ್ರೀಧರ್‌, ಮಲ್ಲೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next