ಚಿಕ್ಕಮಗಳೂರು: ನಗರದ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆಗೆ ನಗರಸಭೆ ಸಾರ್ವಜನಿಕರಿಂದ ಮಾಹಿತಿ ಪಡೆದು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ ತಿಳಿಸಿದರು.
ಶುಕ್ರವಾರ ನಗರದ ನಗರಸಭೆ ಸಭಾಂಗಣದಲ್ಲಿ 2020-21ನೇ ಸಾಲಿನ ನಗರಸಭೆ ಬಜೆಟ್ ಕುರಿತ ಸಾರ್ವಜನಿಕರ ಎರಡನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೃತ್ ಯೋಜನೆ ಹಾಗೂ ಯುಜಿಡಿ ಕಾಮಗಾರಿ ಮಾ.8 ರೊಳಗೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುವುದು. ಸರ್ಕಾರಿ ಹೆರಿಗೆ ಆಸ್ಪತ್ರೆ ಮುಂಭಾಗ ಡಾ| ಬಿ.ಆರ್.ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ನಗರಸಭೆ ಸೂಕ್ತ ಕ್ರಮ ಕೈಗೊಂಡಿದೆ. ನಗರದ ಅಭಿವೃದ್ಧಿಗೆ ನಾಗರಿಕರು ತಮ್ಮ ಸಲಹೆ ಸಹಕಾರ ನೀಡಬೇಕೆಂದರು.
ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನಗರದ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದರೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ಕನಿಷ್ಟ ಪಕ್ಷ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನಾದರೂ ಮಾಡಿ. ನಗರದ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿದರು. ಹಿರಿಯ ನಾಗರಿಕ ನಂಜುಂಡರಾವ್ ಮಾತನಾಡಿ, ನಗರದಲ್ಲಿ ನಿರ್ಮಿಸಿರುವ ಬಾಕ್ಸ್ ಚರಂಡಿಗಳಿಗೆ ಸ್ಲ್ಯಾಬ್ ಹಾಕದೆ ಇರುವುದರಿಂದ ದುರ್ವಾಸನೆ ಬರುತ್ತಿದೆ. ನಗರಸಭೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ, ತೆರಿಗೆ ಹಣ ಮಾತ್ರ ಹೆಚ್ಚು ಮಾಡಲಾಗುತ್ತಿದೆ. ಜನತೆಗೆ ಮೂಲಭೂತ ಸೌಲಭ್ಯ ನೀಡಿ ತೆರಿಗೆ ಹೆಚ್ಚಿಗೆ ಮಾಡಿ ಎಂದು ಸಲಹೆ ನೀಡಿದರು.
ಬಹುಜನ ಸಮಾಜವಾದಿ ಪಕ್ಷದ ಮುಖಂಡ ಗಂಗಾಧರ್ ಮಾತನಾಡಿ, ನಗರದ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆ ಸಮರ್ಪಕವಾಗಿ ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ರಸ್ತೆ ಬದಿಯಲ್ಲಿ ಗಿಡ ಬೆಳೆಸಲು ಸಾಧ್ಯವಾಗದಂತೆ ಮಾಡಲಾಗಿದೆ. ರಸ್ತೆಗಳು ಧೂಳಿನಿಂದ ಕೂಡಿದ್ದು, ನಗರದ ಜನರಿಗೆ ಅನಾರೋಗ್ಯ ಕಾಡುವ ಮುನ್ಸೂಚನೆ ಕಾಣುತ್ತಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿದರು ನಗರದ ಅಭಿವೃದ್ಧಿ ಕುಂಠಿತವಾಗಿರುವುದು ನೋವಿನ ಸಂಗತಿ ಎಂದರು.
ಮಾಜಿ ನಗರಸಭೆ ಸದಸ್ಯ ರೂಬಿನ್ ಮೋಸಸ್ ಮಾತನಾಡಿ, ನಗರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳನ್ನು ನಗರಸಭೆ ಅಧಿಕಾರಿಗಳು ಯಾರೂ ಸ್ಥಳ ಪರಿಶೀಲನೆ ಮಾಡುವುದಿಲ್ಲ. ಪರಿಶೀಲನೆ ನಡೆಸದೆ ಬಿಲ್ ನೀಡಲಾಗುತ್ತಿದೆ. ಗೌರಿ ಕಾಲುವೆ ಬಾಕ್ಸ್ ಚರಂಡಿಗೆ ಸ್ಲ್ಯಾಬ್ ನಿರ್ಮಿಸುವುದಾಗಿ ಕಾಮಗಾರಿ ಆರಂಭಿಸಿ ಇದುವರೆಗೂ ಸ್ಲ್ಯಾಬ್ ಹಾಕಿಲ್ಲ. ನಗರದಲ್ಲಿ ಬೀದಿ ನಾಯಿ ಮತ್ತು ಹಂದಿಗಳ ಸಂಖ್ಯೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಬೀದಿನಾಯಿ, ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ, ನಗರದ ಅಭಿವೃದ್ಧಿಗೆ ಎಂ.ಜಿ ರಸ್ತೆಯಲ್ಲಿರುವ ನಗರಸಭೆ ಜಾಗದಲ್ಲಿ ಮಾರುಕಟ್ಟೆ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕು. ಬಸ್ ನಿಲ್ದಾಣ ಬಳಿ ಇರುವ ಜೈಲು ಜಾಗವನ್ನು ನಗರಸಭೆ ಬಳಸಿಕೊಳ್ಳಬೇಕು. ಇಂದಾವರ ಕಸ ವಿಲೆವಾರಿಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ನಗರಸಭೆ ಲೆಕ್ಕ ಅಧಿಧೀಕ್ಷಕರಾದ ಲತಾಮಣಿ, ಕಚೇರಿ ವ್ಯವಸ್ಥಾಪಕರಾದ ಮಂಜುನಾಥ್, ಪರಿಸರ ಅಭಿಯಂತರರಾದ ರಕ್ಷಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.