ಚಿಕ್ಕಮಗಳೂರು: ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮೂಲಕ ಸಮಾಜದಲ್ಲಿ ದೌರ್ಜನ್ಯ ಪ್ರಾರಂಭವಾಗಿದ್ದು, ಅವುಗಳ ವಿರುದ್ಧ ಎಲ್ಲರೂ ಧ್ವನಿ ಎತ್ತುವಂತಾಗಬೇಕೆಂದು ಜೆ.ಎಂ.ಎಫ್.ಸಿ. ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧಿಧೀಶೆ ಅರುಣಾ ಕುಮಾರಿ ಹೇಳಿದರು.
ನಗರದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಭುವನೇಂದ್ರ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಸಂಸ್ಥೆಯು ಮಕ್ಕಳಿಗೆ ನೀಡಿರುವ ಹಕ್ಕುಗಳು ದುರ್ಬಳಕೆಯಾದರೆ ಕಾನೂನಿನಡಿ ದೂರು ಸಲ್ಲಿಸಬಹುದು. ವಿಶ್ವಸಂಸ್ಥೆ ಮಕ್ಕಳಿಗೆ ನೀಡಿರುವ ಹಕ್ಕುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಮಕ್ಕಳು ತಮಗೆ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಪೋಷಕರು ಮತ್ತು ಶಿಕ್ಷಕರ ಜೊತೆಗೆ ಹಂಚಿಕೊಂಡರೆ ಸೂಕ್ತ ಪರಿಹಾರ ದೊರಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜೆ.ಎಂ.ಎಫ್.ಸಿ. ಮೂರನೆಯ ಹೆಚ್ಚುವರಿ ಸಿವಿಲ್ ನ್ಯಾಯಾಧಿಧೀಶೆ ಕೆ.ಆರ್.ದೀಪಾ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಮಕ್ಕಳು ಮಾನವೀಯ ಮೌಲ್ಯಗಳನ್ನು, ಸಾಂಸ್ಕೃತಿಕ ಅಂಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕೆಂದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಆರ್. ಜಗದೀಶ್ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಸಾಧನೆ ಮಾಡಬೇಕು. ಸಾಧನೆಗೆ ಛಲ ಬೇಕೆಂದರು. ಎಸ್.ಟಿ.ಜೆ. ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಜೆ.ಕೆ.ಭಾರತಿ ಮಕ್ಕಳು ಮತ್ತು ದೇಶದ ಭವಿಷ್ಯದ ಬಗ್ಗೆ ಹಾಗೂ ವಕೀಲೆ ಡಿ.ಎಸ್.ಮಮತಾ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಭುವನೇಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ನರೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಎಸ್‌ಬಿ ಸಮಾಜದ ಮತ್ತು ಟ್ರಸ್ಟಿ ಅಧ್ಯಕ್ಷ ದೇವದಾಸ್ ಹೆಗಡೆ, ಪ್ರಿನ್ಸಿಪಾಲ್ ಕೆ.ಪಿ.ದೇವರಾಜ್ ಇತರರಿದ್ದರು.