Advertisement

ಸಹಜ ಸ್ಥಿತಿಯತ್ತ ಚಿಕ್ಕಮಗಳೂರು

06:00 AM Dec 05, 2017 | Team Udayavani |

ಚಿಕ್ಕಮಗಳೂರು/ಹುಣಸೂರು: ದತ್ತ ಜಯಂತಿ ಆಚರಣೆ ವೇಳೆ ಗಲಾಟೆ ನಡೆದು ಉದ್ವಿಗ್ನಗೊಂಡಿದ್ದ ಚಿಕ್ಕಮಗಳೂರು ಹಾಗೂ ಹುಣಸೂರು ಸಹಜ ಸ್ಥಿತಿಗೆ ಮರಳಿದೆ. ಭಾನುವಾರ ಬೆಳಗ್ಗೆಯಿಂದ ಚಿಕ್ಕಮಗಳೂರಿನ ವಿವಿಧೆಡೆ ಕಲ್ಲು ತೂರಾಟ, ಯುವಕರಿಬ್ಬರ ಮೇಲೆ ಹಲ್ಲೆ ನಡೆದ ನಂತರ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿತ್ತು. ಈ ಮಧ್ಯೆ ರಾತ್ರಿ ನಗರದ ತಮಿಳು ಕಾಲೋನಿಯಲ್ಲಿ ಪೊಲೀಸರು ಪೆಟ್ರೋಲ್‌ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ನಗರದ ತಮಿಳು ಕಾಲೋನಿ ಬಳಿ ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿ ಬಾಂಬ್‌ ಎಸೆಯುವ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು 5 ಪೆಟ್ರೋಲ್‌ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾತ್ರಿ ತಮಿಳುಕಾಲೋನಿ ಬಳಿ ಗುಂಪೊಂದು ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿತು. ಇದನ್ನು ತಡೆಯಲು ಹೋದ ಪೊಲೀಸರ ಮೇಲೂ ಕಲ್ಲು ತೂರಿ ಒಂದು ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ. ಅದೃಷ್ಟವಶಾತ್‌ ಇದರಿಂದ ಯಾರಿಗೂ ಗಾಯಗಳಾಗಿಲ್ಲ. ಕಾರ್ಯಾಚರಣೆ ನಡೆಸಿದ ಪೊಲೀಸರು 13 ಜನರನ್ನು ಬಂಧಿಸಿ ಪೆಟ್ರೋಲ್‌ ಬಾಂಬ್‌ ವಶಪಡಿಸಿಕೊಂಡು ಗಲಭೆ ಹೆಚ್ಚಿಸುವ ಸಂಚನ್ನು ವಿಫಲಗೊಳಿಸಿದ್ದಾರೆ.

ದತ್ತ ಜಯಂತಿ ಗಲಾಟೆಗೆ ಸಂಬಂಧಿಸಿದಂತೆ ಒಟ್ಟೂ ಮೂರು ಪ್ರಕರಣ ದಾಖಲಾಗಿದೆ. ಒಟ್ಟು  32 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಕೆ.ಅಣ್ಣಾಮಲೈ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆಯಿಂದ ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ ನಡೆದ ತಕ್ಷಣ ಅದನ್ನು ನಿಯಂತ್ರಣಕ್ಕೆ ತರಲಾಗಿತ್ತು. ರಾತ್ರಿ ನಗರದ ತಮಿಳು ಕಾಲೋನಿಯ ಬಳಿ ದತ್ತಮಾಲಾಧಾರಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಯಿತು. ಕೂಡಲೆ ಕಾರ್ಯಾಚರಣೆ ನಡೆಸಿ 13 ಜನರನ್ನು ಬಂಧಿಸಲಾಯಿತು. ಅವರಲ್ಲಿ 4 ಜನ ಅಪ್ರಾಪ್ತ ವಯಸ್ಸಿನ ಯುವಕರೂ ಇದ್ದಾರೆ ಎಂದು ಹೇಳಿದರು.

Advertisement

32 ಜನರ ಬಂಧನ: ದತ್ತಜಯಂತಿಯಂದು ಪೀಠದಲ್ಲಿ ಗೋರಿ ಕೀಳುವ ಯತ್ನ, ನಗರದಲ್ಲಿ ನಡೆದ ದಾಳಿ ಎಲ್ಲವೂ ಸೇರಿ ಒಟ್ಟಾರೆ 3 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಒಟ್ಟು 32 ಜನರನ್ನು ಬಂಧಿಸಲಾಗಿದೆ. 3 ವಾಹನ ಹಾಗೂ 5 ಪೆಟ್ರೋಲ್‌ ಬಾಂಬ್‌ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಭಾನುವಾರ ದತ್ತಭಕ್ತರು ಸಾಲಿನಲ್ಲಿ ನಿಂರು ಪಾದುಕೆ ದರ್ಶನ ಪಡೆಯುತ್ತಿರುವ ವೇಳೆ  ಓರ್ವ ಯುವಕ ನಿರ್ಬಂಧಿತ ಪ್ರದೇಶಕ್ಕೆ ನುಗ್ಗಿ ಅಲ್ಲಿ ಭಗವಾಧ್ವಜ ಹಾರಿಸಿದ. ಆ ಯುವಕ ತರೀಕೆರೆಯವನು ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಹೊರ ಕಳುಹಿಸಿದರು. ಆಗ ದತ್ತಮಾಲಾಧಾರಿಗಳ ಗುಂಪೊಂದು ದತ್ತಪೀಠದ ಮುಖ್ಯ ನಿರ್ಬಂಧಿತ ಪ್ರದೇಶಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಆಗ ಅಪಾರ ಸಂಖ್ಯೆಯಲ್ಲಿದ್ದ ಮತ್ತೂಂದು ಗುಂಪು ಇದನ್ನು ಪ್ರಶ್ನಿಸಿ ಗಲಾಟೆ ಮಾಡಿದೆ. ಈ ಸಂದರ್ಭದಲ್ಲಿ ಏಳೆಂಟು ಜನರಿದ್ದ ದತ್ತಭಕ್ತರ ತಂಡ ಮುಖ್ಯ ನಿರ್ಬಂಧಿತ ಪ್ರದೇಶದ ಪಕ್ಕದಲ್ಲಿರುವ ಗೋರಿಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಒಂದೆರೆಡು ಜನ ಗೋರಿಗೆ ಹಾನಿ ಉಂಟು ಮಾಡಿದ್ದಾರೆ. ಸ್ಥಳೀಯ ಪೊಲೀಸರು ಅವರನ್ನೂ ಕೂಡ ಹೊರಹಾಕಿದ್ದಾರೆ. ಯಾರೆಲ್ಲಾ ಗೋರಿಗೆ ಹಾನಿ ಉಂಟುಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ವಾರದೊಳಗೆ ಬಂಧಿಸಲಾಗುವುದು. ವಿಡಿಯೋ ರೆಕಾರ್ಡ್‌, ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾದ ಫೋಟೋಗಳು ಇವರ ಪತ್ತೆಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ನಗರದ ಉಪ್ಪಳ್ಳಿಯಲ್ಲಿ ಬಜರಂಗದಳ ಕಾರ್ಯಕರ್ತರಿದ್ದ ಬಸ್‌ ಮೇಲೆ ಕಲ್ಲು ತೂರಿದ ಪ್ರಕರಣದಲ್ಲಿ ಪ್ರದೀಪ್‌ ಎಂಬುವರ ದೂರು ಆಧರಿಸಿ 3 ಜನರನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮೆಕ್ಯಾನಿಕ್‌ ಅಣ್ಣಪ್ಪ ಎಂಬುವವರು ಕೆ.ಎಂ. ರಸ್ತೆಯಲ್ಲಿ ಬರುತ್ತಿದ್ದಾಗ 13 ಮಂದಿ ಅನ್ಯಕೋಮಿನ ಹುಡುಗರು ಅವರ ಮೇಲೆ ಕಲ್ಲು ತೂರಿದ್ದಾರೆ. ಅದೇ ಗುಂಪು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿ ಪೆಟ್ರೋಲ್‌ ಬಾಂಬ್‌ ಎಸೆದಿತ್ತು ಎಂದು ಹೇಳಿದರು.

ದತ್ತಪೀಠದಲ್ಲಿ ಗೋರಿ ಕಿತ್ತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸುಮೊಟೋ ಕೇಸ್‌ ದಾಖಲು ಮಾಡಲಾಗುವುದು. ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ, ಭಾಷಣ, ಘೋಷಣೆ ಮೂಲಕ ಜನರನ್ನು ಪ್ರಚೋದಿಸಿ ಈ ಕೃತ್ಯ ನಡೆಸಲು ಅವಕಾಶ ಮಾಡಿಕೊಟ್ಟಿರುವವರ ಮೇಲೆ ಐಪಿಸಿಯ ವಿವಿಧ ಕಲಂಗಳಡಿ ಕೇಸು ದಾಖಲು ಮಾಡಲಾಗುವುದು. ಏಳೆಂಟು ಜನ ಬೇರೆ ಜಿಲ್ಲೆಯವರಾಗಿದ್ದರೆ, ಉಳಿದವರೆಲ್ಲಾ ಸ್ಥಳೀಯರೇ ಆಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ಸೋಮವಾರ ಬೆಳಗ್ಗೆ ಹಿಂದೂ ಮತ್ತು ಮುಸಲ್ಮಾನ್‌ ಸಮುದಾಯದ ಮುಖಂಡರೊಂದಿಗೆ ಘಟನೆ ಸಂಬಂಧ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಸಹಜ ಸ್ಥಿತಿಗೆ ಮರಳಿದ ಹುಣಸೂರು
ಸಂಸದ ಪ್ರತಾಪ್‌ ಸಿಂಹ ಬಿಡುಗಡೆ ಹಿನ್ನೆಲೆಯಲ್ಲಿ ಹುಣಸೂರು ಬಂದ್‌ ಹಿಂಪಡೆದರೂ ನಗರದಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಅಘೋಷಿತ ಬಂದ್‌ ವಾತಾವರಣವಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಸೋಮವಾರ ಸಂಜೆ 6ಗಂಟೆ ನಂತರ ಹಿಂಪಡೆಯಲಾಯಿತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ರಸ್ತೆಗಳಲ್ಲಿ ಹೆಚ್ಚಿನ ಜನ ಸಂಚಾರ ಕಂಡು ಬರಲಿಲ್ಲ. ಬಹುತೇಕ ಅಂಗಡಿ ಮುಂಗಟ್ಟುಗಳವರು ಸ್ವಯಂಪ್ರೇರಿತವಾಗಿ ಬಾಗಿಲು ಹಾಕಿದ್ದರು.  ಬಸ್‌ ನಿಲ್ದಾಣ ಸುತ್ತಮುತ್ತಲಿನ ಹೋಟೆಲ್‌ಗ‌ಳನ್ನು ಬಿಟ್ಟರೆ ಬಹುತೇಕ ಹೋಟೆಲ್‌ಗ‌ಳೂ ಬಾಗಿಲು ಮುಚ್ಚಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next