Advertisement

ಮಹಿಳೆಯರು ಯಾರಿಗೂ ಕಡಿಮೆ ಇಲ್ಲ

03:30 PM Mar 12, 2020 | Naveen |

ಚಿಕ್ಕಮಗಳೂರು: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತಾ ನಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ ಎಂದು 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಸಿ.ಎಸ್‌.ಶರ್ಮಿಳಾ ಹೇಳಿದರು.

Advertisement

ನಗರದ ವಿಜಯಪುರದಲ್ಲಿರುವ ಕಸ್ತೂರ ಬಾ ಸದನದಲ್ಲಿನ ವೃತ್ತಿನಿರತ ಮಹಿಳೆಯರ ವಸತಿ ನಿಲಯದಲ್ಲಿ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಸ್ತೂರ ಬಾ ಸದನದ ಸಂಯುಕ್ತಾಶ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ದಿನ ಆಚರಣೆ ನ್ಯೂ ಯಾರ್ಕ್‌ನಲ್ಲಿ ಕ್ಲಾರಾ ಜಟ್ಕಿನ್‌ ಎನ್ನುವ ಮಹಿಳೆಯೊಬ್ಬಳು ಸಮಾನ ವೇತನ, ಸಮಾನ ಹಕ್ಕಿಗಾಗಿ ಹೋರಾಡಿದ ದಿನವಾಗಿದೆ. ಅದರ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಯುಗದಲ್ಲಿ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಬಾಹ್ಯಾಕಾಶ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ವೇದಗಳ ಕಾಲದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ, ಗೌರವವಿತ್ತು. ಆದರೆ, ಇಂದು ಮಹಿಳೆಯ ದೇಹ ರಚನೆ, ದೈಹಿಕ ವ್ಯತ್ಯಾಸದಿಂದಾಗಿ ಆಕೆಯನ್ನು ಅಬಲೆಯಂತೆ ಬಿಂಬಿಸಿ ಅಸಮಾನತೆಯಿಂದ ಕಾಣಲಾಗುತ್ತಿದೆ. ಯಾವೊಬ್ಬ ಮಹಿಳೆಯೂ ಅಬಲೆಯಲ್ಲ, ಸಬಲೆ. ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವು ವೀರ ನಾರಿಯರು ಜನಿಸಿದ ನಾಡಿನಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕೆಂದು ತಿಳಿಸಿದರು.

3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾ ಧೀಶೆ ಕೆ.ಆರ್‌.ದೀಪಾ ಮಾತನಾಡಿ, ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಮಹಿಳೆಯರು ಪ್ರಗತಿ ಹೊಂದಬೇಕು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಸಬಲೀಕರಣ ಸಾಧ್ಯ ಎಂದರು.

Advertisement

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ಕಿರುಕುಳ ಹಾಗೂ ಅತ್ಯಾಚಾರದಂತಹ ಪ್ರಕರಣಗಳು ಕಂಡುಬರುತ್ತಿದ್ದು ದೌರ್ಜನ್ಯ ತಡೆಯಲು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾನೂನು ಸೇವಾ ಪ್ರಾ ಧಿಕಾರಗಳಿದ್ದು, ಅವುಗಳ ಉಪಯೋಗ ಪಡೆದುಕೊಳ್ಳುಬೇಕು. ಮಹಿಳೆಯರು ಹಕ್ಕು ಸಂರಕ್ಷಣೆಗಾಗಿ ಕಾನೂನು ರೂಪಿಸಲಾಗಿದ್ದು, ನೊಂದ ಮಹಿಳೆಯರು ಸೂಕ್ತ ನ್ಯಾಯ ಪಡೆದುಕೊಳ್ಳವಂತೆ ತಿಳಿಸಿದರು.

ಕಸ್ತೂರ ಬಾ ಸದನದ ಅಧ್ಯಕ್ಷೆ ಯಮುನ ಚೆನ್ನಬಸಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸೇನೆ, ಬಾಹ್ಯಾಕಾಶ, ರಾಜಕೀಯ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಪ್ರಾಮಾಣಿಕ ಹಾಗೂ ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಿಳೆ ಯರು ಮತ್ತಷ್ಟು ಸಬಲರಾಗಿ ಉನ್ನತ ಸ್ಥಾನ ಗಳಿಸಬೇಕು. ಜೊತೆಗೆ ಸ್ವತಂತ್ರವಾಗಿ ಆಲೋಚಿಸುವ, ಸ್ವಾವಲಂಬಿಯಾಗಿ ಬದುಕುವ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕೆಂದರು.

ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕಿ ಡಾ| ಎಚ್‌.ಪಿ.ಮಂಜುಳಾ ಮಹಿಳಾ ಸಬಲೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಹೇಮಾ, ಕಸ್ತೂರ ಬಾ ಸದನದ ಉಪಾಧ್ಯಕ್ಷೆ ಯಶೋಧ ಲಕ್ಷ್ಮಣ್‌ ಗೌಡ, ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next