ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಹೊಸ ಆಚರಣೆಗಳ ವಿವಾದಕ್ಕೆ ಕಾರಣವಾಗುತ್ತಿದೆ. ಶಾಖಾದ್ರಿ ವಂಶಸ್ಥ ಅಜ್ಜತ್ ಪಾಷ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೇಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಹೊಸ ಆಚರಣೆಗೆ ಅವಕಾಶವಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಶಾಖಾದ್ರಿ ವಂಶಸ್ಥ ಅಜ್ಜಲ್ ಪಾಷ ಎಂಬುವರು ಗರ್ಭಗುಡಿಯಲ್ಲಿ ಫಾತಿಹ ನಡೆಸಲು ಅನುಮತಿ ಕೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಜ.17ಕ್ಕೆ ಅರೇಬಿಕ್ ಶ್ಲೋಕ ಹೇಳಲು ಅವಕಾಶ ಕೇಳಿದ್ದರು. ಅಜ್ಜತ್ ಪಾಷ ಪ್ರಾರ್ಥನೆ ಸಲ್ಲಿಸಲು ಇನಾಂ ದತ್ತಾತ್ರೇಯ ಪೀಠಕ್ಕೆ ಆಗಮಿಸಿದ್ದರು. ಆದರೆ, ಜಿಲ್ಲಾಡಳಿತ ಅವಕಾಶ ಕೊಡದೆ ತಡೆದು ವಾಪಾಸ್ ಕಳಿಸಿದೆ.
ಈ ಹಿನ್ನೆಲೆಯಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸುತ್ತಮುತ್ತ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಖುದ್ದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ಇದೇ ದಿನ ಹಿಂದೂ ಪರ ಸಂಘಟನೆಯವರು ದತ್ತಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದರು. ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಹೊಸ ಆಚರಣೆಗಳಿಗೆ ಅವಕಾಶ ವಿಲ್ಲವೆಂದು ನ್ಯಾಯಾಲಯದ ಆದೇಶವಿದ್ದರೂ ಪದೇ ಪದೇ ಹೊಸ ಆಚರಣೆ ಅವಕಾಶ ಕೋರಿ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.