Advertisement

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆ ಬಲಿ; ಓರ್ವನ ಸ್ಥಿತಿ ಗಂಭೀರ

10:12 AM Mar 27, 2022 | Team Udayavani |

ಚಿಕ್ಕಮಗಳೂರು: ಕಾಫಿ ತೋಟದ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ  ಕಾರ್ಮಿಕ ಮಹಿಳೆ ಸಾವನ್ನಪ್ಪಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಆಲ್ದೂರಿನಲ್ಲಿ ಶನಿವಾರ ನಡೆದಿದೆ.

Advertisement

ಸರೋಜಬಾಯಿ (45) ಮೃತಪಟ್ಟ ದುರ್ದೈವಿ. ಕಾರ್ಮಿಕ ದುಗ್ಗಪ್ಪ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ.

ಮೃತ ಮಹಿಳೆ ಹಾಗೂ ಗಾಯಗೊಂಡ ಕಾರ್ಮಿಕ ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಬ್ಯಾಡಗಿ ಮೂಲದವರು. ಕುಟುಂಬ ಸಮೇತರಾಗಿ ಜಿಲ್ಲೆಗೆ ಬಂದು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಶನಿವಾರ ಮರ ಹತ್ತಿ, ಕಾಳು ಮೆಣಸು ಕೊಯ್ಯುವಾಗ ಆನೆ ದಾಳಿ ಮಾಡಿದೆ.

ತೋಟದಲ್ಲಿ ಕೆಲಸ ಮಾಡುವಾಗ ಸದ್ದಿಲ್ಲದೆ ಬಂದ ಆನೆ ಮಹಿಳೆಯನ್ನು ಎತ್ತಿ ಬಿಸಾಡಿದೆ. ಮೈಮೇಲೆ ಯಾವುದೇ ಗಾಯವಾಗದಿದ್ದರೂ ಆನೆ ನೆಲಕ್ಕೆ ಬಡಿದಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸರೋಜಬಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಒಂದು ಚಿಕ್ಕ ಗಂಡು ಮಗುವಿದೆ. ಸರ್ಕಾರ ಹಾಗೂ ತೋಟದ ಮಾಲೀಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ:ಆರು ದಿನದಲ್ಲಿ ಐದನೇ ಬಾರಿಗೆ ಏರಿಕೆ ಕಂಡ ಪೆಟ್ರೋಲ್ – ಡೀಸೆಲ್ ಬೆಲೆ!

ತೋಟದಲ್ಲಿ ಆನೆಯನ್ನು ಕಂಡ ಕೂಡಲೇ ಮೃತ ಸರೋಜಬಾಯಿ ಜೊತೆಗಿದ್ದ ಮಗುವನ್ನು ಹೋಗು ಎಂದು ಕಳಿಸಿದ್ದಾಳೆ. ಆನೆಯನ್ನು ಕಂಡು ಆಕೆ ಕೂಗುವಾಗ ಮಂಗಗಳು ಊಟದ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗುತ್ತಿರಬೇಕು. ಅದಕ್ಕೆ ನಮ್ಮವರೇ ಕೂಗಾಡುತ್ತಿದ್ದಾರೆ ಎಂದು ಉಳಿದವರು ಭಾವಿಸಿದ್ದಾರೆ.

ಮಗು ಓಡಿ ಬಂದು ಅಳುತ್ತಾ ಅಮ್ಮನನ್ನ ಆನೆ ಹಿಡಿದುಕೊಂಡಿದೆ ಎಂದು ಹೇಳಿದ ಮೇಲೆ ಎಲ್ಲರೂ ಹೋಗುವಷ್ಟರಲ್ಲಿ ಆನೆ ಆಕೆಯನ್ನು ಎತ್ತಿ ನೆಲಕ್ಕೆ ಬಡಿದಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗದೆ ಆಕೆ ಸಾವನ್ನಪ್ಪಿದ್ದಾರೆ. ಆಲ್ದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಗುತ್ತಿ, ಕೋಗಿಲೆ, ಗೌಡಹಳ್ಳಿ, ಸಾರಗೋಡು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಆಗಾಗ್ಗೆ ಆನೆಗಳ ಹಿಂಡು ಬೆಳೆಗಳ ಮೇಲೆ ದಾಂಗುಡಿ ಇಟ್ಟು ಬೆಳೆಯನ್ನು ನಾಶ ಮಾಡುತ್ತಿವೆ. ಸ್ಥಳಿಯರು ಆನೆಯನ್ನು ಸ್ಥಳಾಂತರಿಸಿ ಎಂದು ಮನವಿ ಮಾಡಿದ್ದು, ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಅನ್ನುವುದು ಸ್ಥಳೀಯರ ಆರೋಪ.

ಈಗಾಗಲೇ ಮಲೆನಾಡಲ್ಲಿ ಆನೆ ದಾಳಿಯಿಂದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಕೂಡ ತುತ್ತು ಅನ್ನಕ್ಕಾಗಿ ಹಾವೇರಿಯಿಂದ ಬಂದು ಬದುಕುತ್ತಿದ್ದ ಮಹಿಳೆ ಆನೆ ದಾಳಿಗೆ ಬಲಿಯಾಗಿದ್ದು ನಿಜಕ್ಕೂ ದುರಂತ. ಇನ್ನಾದರೂ ಅಧಿಕಾರಿಗಳು ಆನೆಗಳನ್ನು ಓಡಿಸಲು ಕ್ರಮಕೈಗೊಳ್ಳುತ್ತಾರೋ ಎಂದು ಕಾದುನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next