ಚಿಕ್ಕಮಗಳೂರು: ಸೌಹಾರ್ದತೆ ಮತ್ತು ಸಾಮರಸ್ಯತೆಯನ್ನು ಕಳೆದುಕೊಂಡು ದಿಕ್ಕು ತಪ್ಪುತ್ತಿರುವ ಇಂದಿನ ಸಮಾಜಕ್ಕೆ ಸಾಹಿತ್ಯ ಮತ್ತು ಕಾವ್ಯ ದಿಕ್ಸೂಚಿಯಾಗಬೇಕೆಂದು ಲೇಖಕಿ ಡಿ.ನಳಿನಾ ಸಲಹೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಅವರ ಮನೆಯಂಗಳದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಗಾದಿ ಬಹುಭಾಷಾ ಸಮನ್ವಯ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ ಮಾತನಾಡಿದರು.
ಎಲ್ಲಾ ಭಾಷೆ ಮತ್ತು ಎಲ್ಲಾ ಮನಸ್ಸುಗಳ ತುಡಿತ ಮತ್ತು ಮಿಡಿತ ಸಹಬಾಳ್ವೆ, ಇರುವ ಅಲ್ಪ ಅವಧಿಯಲ್ಲಿ ಸೌಹಾರ್ದತೆಯಿಂದ ನಗುನಗುತ್ತಾ ಬಾಳುವುದು ಎಲ್ಲರ ಆಶಯ. ಆದರೆ ಚುನಾವಣೆ
ಸೇರಿದಂತೆ ವಿವಿಧ ಸನ್ನಿವೇಶಗಳಿಂದಾಗಿ ಸಮಾಜ ಇಂದು ಅಶಾಂತಿಯ ಬೀಡಾಗಿದೆ ಎಂದು ವಿಷಾದಿಸಿದರು.
ಇಂತಹ ವಿಷದ ವಾತಾವರಣದಲ್ಲಿ ಮನಸ್ಸುಗಳನ್ನು ಒಗ್ಗೂಡಿಸುವಂತಹ ಸಾಹಿತ್ಯ ಕಾವ್ಯ ಅಗತ್ಯ. ಈ ಹಿನ್ನೆಲೆಯಲ್ಲಿ ಕವಿಗಳು ಮತ್ತು ಸಾಹಿತಿಗಳು ಎಡ-ಬಲ ಪಂಥಗಳ ಚೌಕಟ್ಟಿನಿಂದ
ಹೊರಬಂದು ಮಾನವೀಯ ನೆಲೆಯಲ್ಲಿ ಬರೆಯಬೇಕು. ಸತ್ಯದ ಬೆಳಕನ್ನು ತೋರುವ ಕೆಲಸ ಮಾಡಬೇಕು. ಎಲ್ಲಾ ಭಾಷೆಯ ಸಾಹಿತ್ಯ ಮತ್ತು ಪದಗಳು ಕನ್ನಡಕ್ಕೆ ಷಾಂತರಗೊಳ್ಳಬೇಕು, ಆ ಮೂಲಕ ಕನ್ನಡಿಗರಿಗೆ ಎಲ್ಲಾ ಭಾಷೆಯಲ್ಲಿರುವ ಉತ್ತಮ ಸಾಹಿತ್ಯ ದೊರೆಯುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಗೀತಾ ಮೋಹನ್, ಡಾ| ಸಿ.ಕೆ.ಸುಬ್ರಾಯ ಇದ್ದರು. ಹತ್ತು ವಿವಿಧ ಭಾಷೆಗಳಲ್ಲಿ ನಡೆದ ಕವನ ವಾಚನ ಸಾರ್ವಜನಿಕರ ಗಮನ ಸೆಳೆಯಿತು. ಸಾಹಿತಿಗಳಾದ ಕ್ಯಾತನಬೀಡು ರವೀಶ್ ಬಸಪ್ಪ, ರಮೇಶ್‌ಬೊಂಗಾಳೆ, ಕೆ.ಮಹಮದ್ ಜಾಫರ್, ನಂದೀಶ್ ಬಂಕೇನಹಳ್ಳಿ, ಬಿ.ಲಕ್ಷ್ಮೀನಾರಾಯಣ, ಸುಂದರ ಬಂಗೇರ, ಬಿ.ತಿಪ್ಪೇರುದ್ರಪ್ಪ, ಲಕ್ಷ್ಮೀ ಶ್ಯಾಮರಾವ್, ಪಿ.ಸಾಯಿ ಅಲೇಕ್ಯ, ಕೆ.ರಾಮನಾಯಕ್ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಡಿ.ಎಂ.ಮಂಜುನಾಥಸ್ವಾಮಿ ನಿರೂಪಿಸಿ, ಪ್ರೊ| ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿ, ಸುರೇಶ್ ವಂದಿಸಿದರು.