Advertisement

ಕೊರೊನಾ ನೆರಳು; ಪ್ರವಾಸಿಗರು ವಿರಳ

12:53 PM Mar 15, 2020 | Naveen |

ಚಿಕ್ಕಮಗಳೂರು: ವಿಶ್ವವನ್ನೇ ಬೆಚ್ಚಿ ಬಿಳಿಸಿರುವ ಕೊರೊನಾ ವೈರಸ್‌ ಕಾಫಿನಾಡಿನ ಜನರಲ್ಲೂ ಆಂತಕ ಮೂಡಿಸಿದೆ. ರಾಜ್ಯದ ಕೆಲ ಭಾಗದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.

Advertisement

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಪ್ರವಾಸಿ ತಾಣಗಳಾದ ದತ್ತಪೀಠ, ಮುಳ್ಳಯ್ಯನಗಿರಿ ಪ್ರದೇಶ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು, ವ್ಯಾಪಾರೋದ್ಯಮಕ್ಕೂ ಬಿಸಿ ತಟ್ಟಿದೆ.

ಪ್ರತಿ ವಾರದ ರಜೆ ದಿನಗಳಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದರು. ಇಡೀ ರಾಜ್ಯಾದ್ಯಂತ ಕೊರೊನಾ ವೈರಸ್‌ ಭೀತಿ ಹರಡಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಕುಕ್ಕುಟೋದ್ಯಮಕ್ಕೂ ಬಿಸಿ: ಕೊರೋನಾ ವೈರಸ್‌ ಭೀತಿ ಕುಕ್ಕುಟೋದ್ಯಮದ ಮೇಲೂ ತನ್ನ ಕರಿನೆರಳು ಬೀರಿದೆ. ಕೋಳಿ ಮಾಂಸದಿಂದ ಕೊರೊನಾ ಹರಡುತ್ತದೆ ಎಂಬ ಸುದ್ಧಿಯಿಂದ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಒಂದು ಕೆ.ಜಿ.ಕೋಳಿ ಮಾಂಸ 40-60 ರೂ. ಮಾರಾಟವಾಗುತ್ತಿದೆ. ಜಿಲ್ಲೆಯ ನಾನಾ ಭಾಗದಲ್ಲಿ ಕೋಳಿ ಸಾಕಾಣಿಕೆ ನಡೆಸುತ್ತಿದ್ದು, ಕೋಳಿ ಮಾಂಸ ಬೆಲೆ ಕುಸಿತದಿಂದ ಕೋಳಿ ಫಾರಂ ಮಾಲೀಕರು ಸಿಕ್ಕ ಬೆಲೆಗೆ ಕೋಳಿ ಮಾರಾಟಕ್ಕೆ ಮುಂದಾಗಿದ್ದಾರೆ.

ಶಾಲಾ-ಕಾಲೇಜು ರಜೆ: ರಾಜ್ಯದಲ್ಲಿ ಕೊರೊನಾ ವೈರಸ್‌ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾ.14ರಿಂದ 28ರ ವರೆಗೆ ಜಿಲ್ಲೆಯ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 1ನೇ ತರಗತಿಯಿಂದ 6ನೇ ತರಗತಿವರೆಗೆ ಶನಿವಾರದಿಂದ ಬೆಸಿಗೆ ರಜೆಯನ್ನು ರಾಜ್ಯ ಸರ್ಕಾರ ನೀಡಿದ್ದು, ಜಿಲ್ಲೆಯಲ್ಲೂ ಇದು ಅನ್ವಯಿಸಲಿದೆ.

Advertisement

ಚಿತ್ರಮಂದಿರ ಬಂದ್‌: ಕೊರೊನಾ ವೈರಸ್‌ ಹರಡದಂತೆ ತಡೆಯಲು ಚಿತ್ರಮಂದಿರಗಳನ್ನು ಒಂದು ವಾರ ಕಾಲ ಬಂದ್‌ ಮಾಡಲಾಗಿದೆ. ಅದರಂತೆ ಜಿಲ್ಲೆಯ ನಾಗಲಕ್ಷ್ಮೀ, ಮಿಲನ, ಗುರುನಾಥ, ಶ್ರೀಲೇಖಾ ಚಿತ್ರಮಂದಿರ ಬಂದ್‌ ಮಾಡಲಾಗಿದೆ.

ಎಲ್ಲೆಲ್ಲೂ ಕೊರೊನಾ ಮಾತು: ಕಳೆದ 15ದಿನಗಳ ಹಿಂದೆ ದುಬೈನಿಂದ ವಾಪಸಾಗಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಮೂಡಿಗೆರೆ ತನ್ನ ತಂಗಿಯ ಮನೆಗೆ ಬಂದಾಗ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ದಾಖಲಿಸಿಕೊಂಡು ಅವರ ರಕ್ತದ ಮಾದರಿ ಮತ್ತು ಕಫವನ್ನು ಹಾಸನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ಕೊರೊನಾ ಸೋಂಕು ಇಲ್ಲ ಎಂಬ ವರದಿ ಬಂದಿದೆ. ಇದರಿಂದ, ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದರು. ಇದರ ಬೆನ್ನಲ್ಲೇ, ಸಿಂಗಾಪೂರದಿಂದ ನಗರಕ್ಕೆ ಬಂದಿದ್ದ ಮಹಿಳೆಯೊಬ್ಬರು ಕೆಮ್ಮು-ಜ್ವರದಿಂದಾಗಿ ನಗರದ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಈ ಸುದ್ದಿ ನಗರದದ್ಯಾಂತ ಹರಡುತ್ತಿದ್ದಂತೆ ಅಂಗಡಿ-ಮುಗ್ಗಟ್ಟು ಸೇರಿದಂತೆ ಸಾರ್ವಜನಿಕ ದಟ್ಟಣೆ ಪ್ರದೇಶದಲ್ಲಿ ಕೊರೊನಾದ್ದೇ ಮಾತಾಗಿದೆ. ಒಟ್ಟಾರೆಯಾಗಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

„ಸಂದೀಪ್‌ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next