Advertisement
ಎರಡು ಬಾರಿ ಸಚಿವರಾಗಿ ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಸಿ.ಟಿ.ರವಿ ಈ ಬಾರಿ ಚುನಾವಣೆಯಲ್ಲಿ ಚಿಕ್ಕಮ ಗಳೂರು ಕ್ಷೇತ್ರದ ಅಭ್ಯರ್ಥಿ ಎನ್ನಲಾಗುತ್ತಿದೆ. ಬಿಜೆಪಿಯಿಂದ ಸ್ಪರ್ಧಿಸುವ ಆಸೆ ಅನೇಕರಲ್ಲಿದ್ದರೂ ರವಿ ವಿರುದ್ಧ ತೊಡೆ ತಟ್ಟುವ ಸಾಹಸಕ್ಕೆ ಯಾರೂ ಮುಂದಾಗಿಲ್ಲ. ಒಂದು ವೇಳೆ ಪ್ರಯ ತ್ನಿಸಿದರೂ ರಾಜಕೀಯ ಭವಿಷ್ಯ ಕಮರುವ ಭಯ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಅಧಿಕೃತಗೊಳಿಸದಿದ್ದರೂ ಸಿ.ಟಿ.ರವಿಯೇ ಅಭ್ಯರ್ಥಿ ಎನ್ನಲಾಗುತ್ತಿದೆ.
Related Articles
Advertisement
ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್ ನೀಡಿದಲ್ಲಿ ಬಿಜೆಪಿಗೆ ಬಿಗ್ ಫೈಟ್ ನೀಡಬಹುದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅವರು ಸ್ಪರ್ಧೆ ವಿಚಾರವಾಗಿ ಎಲ್ಲಿಯೂ ತುಟಿಬಿಚ್ಚಿಲ್ಲ. ಕೆಪಿಸಿಸಿ ನಾಯಕರು ಹೇಳಿದರೆ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ಬಿ.ಎಚ್.ಹರೀಶ್ ಹಾಗೂ ಎಚ್. ಡಿ.ತಮ್ಮಯ್ಯ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೂ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಕೆಪಿಸಿಸಿ ಮುಖಂಡರು ಹೇಗೆ ನಿಭಾಯಿಸುತ್ತಾರೆ ಎಂದು ನೋಡಬೇಕಿದೆ.
ಜೆಡಿಎಸ್ ಅಭ್ಯರ್ಥಿ ಬದಲಿಸುತ್ತಾ?: ಜೆಡಿಎಸ್ ರಾಷ್ಟ್ರೀಯ ಮೊದಲ ಪಟ್ಟಿಯಲ್ಲೇ ಚಿಕ್ಕಮಗಳೂರು ಕ್ಷೇತ್ರದಿಂದ ಬಿ.ಎಂ.ತಿಮ್ಮಶೆಟ್ಟಿ ಹೆಸರು ಹೊರಡಿಸಿಯೇ ಬಿಟ್ಟಿತು. ಆದರೆ, ಎಚ್. ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಬಳಿಕ ಅಭ್ಯರ್ಥಿ ಬದಲಾವಣೆಯ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಎಸ್.ಎಲ್.ಭೋಜೇಗೌಡ ಹಾಗೂ ದಿ|ಧರ್ಮೇಗೌಡರ ಅವರ ಪುತ್ರ ಸೋನಾಲ್ ಗೌಡ ಹೆಸರು ಈ ನಡುವೆ ನುಸುಳಿ ಬರುತ್ತಿದೆ.
ಸಿ.ಟಿ.ರವಿಗೆ ಆಪ್ತನೇ ಸವಾಲು?ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮತಗಳೇ ನಿರ್ಣಾಯಕ. ಸಿ.ಟಿ.ರವಿ ಗೆಲುವಿನ ಹಿಂದೆ ಎರಡು ಸಮುದಾಯಗಳ ಪಾತ್ರ ಹೆಚ್ಚಿದೆ. ಬಿಜೆಪಿಯಲ್ಲಿ ಟಿಕೆಟ್ ಕೇಳಿ ಅಸಮಾಧಾನಗೊಂಡ ಲಿಂಗಾಯತ ಮುಖಂಡ ಹಾಗೂ ಅವರ ಆಪ್ತ ಎಚ್.ಡಿ.ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಗೊಂಡು ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ತಮ್ಮಯ್ಯಗೆ ಟಿಕೆಟ್ ನೀಡಿದಲ್ಲಿ ಆಪ್ತನ ವಿರುದ್ಧ ಸೆಣಸಬೇಕಿದೆ. ಅಲ್ಲದೇ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂಬ ಭಾವನೆ ಸಮುದಾಯದವರಲ್ಲಿದ್ದು, ತಮ್ಮಯ್ಯ ಅವರನ್ನು ಬೆಂಬಲಿಸಿದರೆ ರವಿ ಗೆಲುವಿಗೆ ಪ್ರಯಾಸ ಪಡಬೇಕಾಗುತ್ತದೆ. ಹಾಗೆಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರವಿ ಮಾಡಿರುವ ಟೀಕೆಗಳು ಕುರುಬ ಸಮುದಾಯವನ್ನು ಕೆರಳಿಸಿದೆ ಎನ್ನಲಾಗಿದೆ. -ಸಂದೀಪ ಜಿ.ಎನ್.ಶೇಡ್ಗಾರ್