ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಹಂತ, ಹಂತವಾಗಿ ಈಡೇರಿಸಲಾಗುವುದು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಭರವಸೆ ನೀಡಿದರು.
ಇಲ್ಲಿನ ಇಂದಿರಾ ನಗರದಲ್ಲಿ ಇರುವ ಸಂಸದರ ಕಚೇರಿಗೆ ಭೇಟಿ ನೀಡಿದ ಬಳಿಕ ಜನರ ಸಮಸ್ಯೆ ಆಲಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಚಿಕ್ಕೋಡಿಯಲ್ಲಿರುವ ಸಂಸದರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಚೇರಿಗೆ ಸಂಬಂಧಿಸಿದಂತೆ ಕೆಲ ಸಣ್ಣ ಪುಟ್ಟ ಕೆಲಸಗಳು ಇವೆ. ಮೂರ್ನಾಲ್ಕು ದಿನಗಳಲ್ಲಿ ಕಚೇರಿ ಪೂರ್ಣಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಅಲ್ಲಿಯೇ ಸಭೆಗಳನ್ನು ನಡೆಸಲಾಗುವುದು ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಜಯಗಳಿಸಿದ ಬಳಿಕ ಮೊದಲ ಬಾರಿಗೆ ನಾನು ಚಿಕ್ಕೋಡಿ ನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದೇನೆ ಎಂದರು.
ಚಿಕ್ಕೋಡಿ ಕ್ಷೇತ್ರದ ವಿವಿಧೆಡೆಯಿಂದ ಜನರು ಇಂದು ತಮ್ಮ ಸಮಸ್ಯೆಗಳನ್ನು ನಿವಾರಿಸಲು ಮನವಿಗಳನ್ನು ಸಲ್ಲಿಸಿದ್ದಾರೆ. ಚಿಕ್ಕೋಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಈ ಭಾಗದ ಜನತೆಯ ಬೇಡಿಕೆ ಇದೆ. ಈ ಕುರಿತು ಎಲ್ಲಾ ಮುಖಂಡರೊಂದಿಗೆ ಚರ್ಚೆ ನಡೆಸುತ್ತೇವೆ. ಚಿಕ್ಕೋಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಿರ್ಧರಿಸುತ್ತಾರೆ ಎಂದರು.
ಚಿಕ್ಕೋಡಿ ಭಾಗದ ಸೈನಿಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಅದೇ ರೀತಿ ಈ ಭಾಗದ ಗಂಭೀರ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗುವುದು, ಇನ್ನು ಪ್ರವಾಹ ಬಂದಾಗ ಆಗುವ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ರಾಯಬಾಗ ಕ್ಷೇತ್ರದ ಮುಖಂಡ ಮಹಾವೀರ ಮೋಹಿತೆ, ಪುರಸಭೆ ಮಾಜಿ ಅಧ್ಯಕ್ಷ ಪಿ.ಐ.ಕೋರೆ, ರಾಜು ವಂಟಮುತ್ತೆ, ಅನಿಲ ಸದಲಗೆ, ವಿಶ್ವನಾಥ ವತನದಾರ, ಪಿರೋಜ ಕಲಾವಂತ, ಮೋಶಿನ ಬಾಡ್ಕರ ಸೇರಿದಂತೆ ಹಲವು ಮುಖಂಡರಿದ್ದರು.