ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಿಗೆ ಪ್ರವಾಹ ಎದುರಾದರೇ ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಸುರಕ್ಷಿತ ಸ್ಥಳಗಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಇಲ್ಲಿನ ಲೋಕೋಪಯೋಗಿ ಸಭಾ ಭವನದಲ್ಲಿ ನಡೆದ ಪ್ರವಾಹ ಮುನ್ನೆಚ್ಚರಿಕೆ ಕುರಿತ ಸಭೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷತೆ ವಹಿಸಿ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಾಳಜಿ ಕೇಂದ್ರದಲ್ಲಿ ಸರಿಯಾದ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಮತ್ತಿತರ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಕೋಯ್ನಾ ಮತ್ತು ಇತರೆ ಜಲಾಶಯ ಮೇಲೆ ನಿಗಾ ಇಡಬೇಕು. ಕಳೆದ ಪ್ರವಾಹದಲ್ಲಿ ಮಾಡಿರುವ ತಪ್ಪುಗಳು ಮತ್ತೇ ಆಗಬಾರದು. ಎಲ್ಲ ಇಲಾಖೆಗಳು ಜಂಟಿಯಾಗಿ ಕೆಲಸ ಕಾರ್ಯ ನಿರ್ವಹಿಸಬೇಕು. ಎಲ್ಲಾ ಕೆಲಸಗಳನ್ನು ಒಬ್ಬರ ಮೇಲೆ ಹಾಕಿ ಜಾರಿಕೊಳ್ಳುವ ಮನೋಭಾವ ಇರಬಾರದು. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಉಂಟಾಗುವ ಮುನ್ಸೂಚನೆ ಇಲ್ಲ. ಮುಂದಿನ ವಾರದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಪ್ರವಾಹದ ಸಾಧ್ಯತೆ ಇರುತ್ತದೆ ಎಂದರು.
ಅತಿವೃಷ್ಠಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಸಿಗುವಂತೆ ಮಾಡಬೇಕು. ಯಾರದೋ ಒತ್ತಡಕ್ಕೆ ಮಣಿದು ಮನೆ ಇದ್ದವರಿಗೆ ಮನೆ ಕೊಡುವ ವ್ಯವಸ್ಥೆ ನಿಲ್ಲಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಗೋಕಾಕ ಡಿವೈಎಸ್ ಪಿ. ಮನೋಜಕುಮಾರ ನಾಯಿಕ, ಅಥಣಿ ಡಿವೈಎಸ್ ಪಿ. ಗಿರೀಶ ಎಸ್.ವಿ., ಚಿಕ್ಕೋಡಿ ಡಿವೈಎಸ್ ಪಿ ಬಸವರಾಜ ಎಲಿಗಾರ, ತಹಶಿಲ್ದಾರ ಸಿ.ಎಸ್.ಕುಲಕರ್ಣಿ ಮುಂತಾದವರು ಇದ್ದರು.