Advertisement
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಪ್ರವಾಹ ಎದುರಾಗಿತ್ತು. ಇದರಿಂದ ಚಿಕ್ಕೋಡಿ ತಾಲೂಕಿನ 11 ಗ್ರಾಮಗಳು ನಡುಗಡ್ಡೆಯಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಕಳೆದ ವರ್ಷ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಆದರೆ ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ಪ್ರವಾಹ ಉಂಟಾಗುವ ಸಂಭವ ಇದ್ದರೂ ಸಹ ಕಳೆದ ವರ್ಷದ ಪರಿಹಾರ ಸಿಗದೇ ಇರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ತಾತ್ಕಾಲಿಕ ಪರಿಹಾರ ವಿತರಣೆ: ಭೀಕರ ಪ್ರವಾಹದಿಂದ ಗೃಹೋಪಯೋಗಿ ಸಾಮಗ್ರಿಗಳನ್ನು ಕಳೆದುಕೊಂಡ ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳ ಜನರಿಗೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ವಿತರಿಸಲಾಗಿದೆ.
ಹಂತ ಹಂತವಾಗಿ ಮನೆ ಪರಿಹಾರ: ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಮನೆಗಳನ್ನು ಸರ್ಕಾರ ಸರ್ವೇ ಮಾಡಿ ವರ್ಕ್ ಆರ್ಡ್‌ರ್ ನೀಡಿದೆ. ಮೊದಲ ಕಂತಾಗಿ 95 ಸಾವಿರ ರೂ. ಪರಿಹಾರ ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ಪರಿಹಾರ ಹಂತ ಹಂತವಾಗಿ ಸಂತ್ರಸ್ತರ ಕೈ ಸೇರಲಿದೆ.
ನದಿ ತೀರದ ರಸ್ತೆ-ಬ್ರಿಡ್ಜ್ ಕಾಮಗಾರಿ ಮುಕ್ತಾಯ: ಯಡೂರವಾಡಿ ಗ್ರಾಮದ ಡೋಣೆ ತೋಟದ ಜನರು ಬೋಟ್ ಸಂಚಾರ ಮಾಡುವಂತಾಗಿತ್ತು. ಸರ್ಕಾರ ಎಚ್ಚೆತ್ತುಕೊಂಡು ಡೋಣೆ ತೋಟಕ್ಕೆ ತೆರಳುವ ಜನರಿಗೆ ಅನುಕೂಲವಾಗಲು ಬ್ರಿಡ್ಜ್ ನಿರ್ಮಿಸಿ ಅನುಕೂಲ ಕಲ್ಪಿಸಿದೆ. ಹದಗೆಟ್ಟ ರಸ್ತೆಗಳ ದುರಸ್ತಿಯಾಗಿದೆ.
ಕಳೆದ ವರ್ಷ ಉಂಟಾದ ಭೀಕರ ಪ್ರವಾದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ವೇ ಮಾಡಿ ಮೊದಲ ಕಂತಿನ ಹಣ ಜಮೆ ಮಾಡಲಾಗಿದೆ. ಉಳಿದ ಹಣ ಜಿಪಿಎಸ್ ಆದ ಮೇಲೆ ಹಂತ ಹಂತವಾಗಿ ಜಮೆ ಆಗುತ್ತದೆ. ಕೆಲವೊಂದು ಗ್ರಾಮದಲ್ಲಿ ತಾಂತ್ರಿಕ ತೊಂದರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗಿಲ್ಲ, ಆ ಸಮಸ್ಯೆ ಸಹ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. –ಸಂತೋಷ ಕಾಮಗೌಡ, ಉಪವಿಭಾಗಾಧಿಕಾರಿ, ಚಿಕ್ಕೋಡಿ.
ಕಳೆದ 2019 ಮತ್ತು 2021ರ ಪ್ರವಾಹ ನಮಗೆ ಸಾಕಷ್ಟು ತೊಂದರೆ ಕೊಟ್ಟಿವೆ. ಬದುಕು ಕಟ್ಟಿಕೊಳ್ಳುವ ತವಕದಲ್ಲಿಯೇ ಪ್ರವಾಹ ನಮ್ಮ ಹೊಟ್ಟೆ ಮೇಲೆ ಬರೆ ಎಳೆದಿದೆ. ಸಂಪೂರ್ಣ ಮನೆ ಬಿದ್ದು ಹೋಗಿದೆ. ಸರ್ಕಾರ ಸೂಕ್ತ ಪರಿಹಾರ ಕೊಟ್ಟರೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮೊದಲ ಕಂತಾಗಿ 95 ಸಾವಿರ ರೂ. ಹೊರತುಪಡಿಸಿ ಉಳಿದ ಪರಿಹಾರ ಬಂದಿಲ್ಲ. ಸರ್ಕಾರ ಗಮನ ಹರಿಸಬೇಕು. – ಸಿದ್ಧಾರ್ಥ ಗಾಯಗೋಳ, ನದಿ ತೀರದ ಗ್ರಾಮಸ್ಥ.
-ಮಹಾದೇವ ಪೂಜೇರಿ