Advertisement

ಕೃಷ್ಣೆಗೆ ನೀರು ತರುವ ಧೀರ ಯಾರು?

10:59 AM Mar 21, 2019 | Team Udayavani |

ಚಿಕ್ಕೋಡಿ: ಮಳೆಗಾಲ, ಚಳಿಗಾಲ ಅವಧಿಯಲ್ಲಿ ಮೈದುಂಬಿ ಹರಿಯುವ ಕೃಷ್ಣಾ ನದಿ ನೀರಿನ ಮಟ್ಟ ಬೇಸಿಗೆಯಲ್ಲಿ ಸಂಪೂರ್ಣ ಕಡಿಮೆಯಾಗುತ್ತಿದೆ. ನದಿ ತೀರದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಂಭವ ಹೆಚ್ಚಾಗಿದ್ದರಿಂದ ಗಡಿ ಭಾಗದಲ್ಲಿ ಆತಂಕ ಉಲ್ಬಣಗೊಂಡಿದೆ.

Advertisement

ನದಿಯಲ್ಲಿ ಇದೀಗ ಅಲ್ಪಸ್ವಲ್ಪ ನೀರು ಹರಿಯಲಾರಂಭಿಸಿದೆ. ಈಗ ಹರಿಯುವ ನೀರು ಒಂದು ವಾರದವರಿಗೆ ಸಾಲಬಹುದು. ಇದೇ ರೀತಿ ನೆತ್ತಿ ಸುಡುವ ಬಿಸಿಲು ಮುಂದುವರಿದರೆ ಕೃಷ್ಣಾ ನದಿ ಬೇಗನೇ ಬತ್ತುವ ದಿನಗಳು ದೂರವಿಲ್ಲ. ಮಾರ್ಚ್‌ ಮೂರನೆ ವಾರವೇ ಈ ಗತಿ ಬಂದರೆ ಮುಂದಿನ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಏನೆಂಬುದು ರೈತರಲ್ಲಿ ಈಗಿನಿಂದಲೇ ಆತಂಕ ಸೃಷ್ಟಿಯಾಗಿದೆ.

ಕಳೆದ ವರ್ಷ ಬೇಸಿಗೆಯ ಜನವರಿ ತಿಂಗಳಿನಲ್ಲೇ ನದಿ ಸಂಪೂರ್ಣ ಬತ್ತಿ ಬರಿದಾಗಿತ್ತು. ನದಿ ತೀರದ ಜನತೆ ನದಿ ಒಡಲಿನಲ್ಲ ಬಾವಿಗಳನ್ನು ತೋಡಿ ಜನ ಜಾನುವಾರಗಳಿಗೆ ನೀರು ಅಗೆಯುತ್ತಾ ಹನಿ ನೀರಿಗಾಗಿ ಪರದಾಡಿದ್ದರು. ಈ ಬಾರಿ ನದಿ ನೀರು
ಮಾರ್ಚ್‌ವರಿಗೆ ಖಾಲಿಯಾಗಿಲ್ಲ, ಆದರೆ ಹರಿವು ಕಡಿಮೆಯಾಗುತ್ತಿದೆ. ತಗ್ಗು ಪ್ರದೇಶದಲ್ಲಿ ಮಾತ್ರ ನೀರಿನ ಮಟ್ಟ ಹೆಚ್ಚಾಗಿದೆ. ಕೆಲ ಕಡೆಗಳಲ್ಲಿ ನದಿ ನೀರು ತಳ ಕಂಡಿದೆ.

ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ರೈತರ ಬೆಳೆಗಳು ಕಮರಿ ಹೋಗುತ್ತಿದ್ದು, ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೃಷ್ಣಾ ನದಿ ನೀರಿನ ಮೇಲೆ ಸುಮಾರು 30 ಗ್ರಾಮಗಳು ಅವಲಂಬಿಸಿವೆ. ಈ ಬಾರಿ ಮಾರ್ಚ್‌ ತಿಂಗಳಲ್ಲಿಯೇ ನದಿ ನೀರಿನ ಮಟ್ಟ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. ನದಿ ನೀರು ನಂಬಿರುವ ಚಿಕ್ಕೋಡಿ ಉಪವಿಭಾಗದ ಅಥಣಿ, ಚಿಕ್ಕೋಡಿ ಮತ್ತು ರಾಯಬಾಗ ತಾಲೂಕಿನ ಜನರು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಪಡುವುದು ಸಾಮಾನ್ಯವಾಗಿದೆ.

ಪ್ರತಿ ವರ್ಷ ನೀರು ಖಾಲಿಯಾದಾಗ ಗಡಿ ಭಾಗದ ಜನಪ್ರತಿನಿಧಿ ಗಳು ನಾ ಮುಂದು ನೀ ಮುಂದು ಎಂದು ಪ್ರತಿಷ್ಠೆಗೆ ಬಿದ್ದು ಮಹಾರಾಷ್ಟ್ರದ ಸರ್ಕಾರದ ಜೊತೆ ಮಾತುಕತೆ ನಡೆಸಿ ನೀರು ಬಿಡಿಸಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ಎಲ್ಲ ಮುಖಂಡರು ಚುನಾವಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಿಂದ ನೀರು ಬಿಡಿಸಿಕೊಂಡು ಬರೋರ್ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಯುವ ರೈತ ಅಕ್ಷಯ ಸಾವಂತ.

Advertisement

ಚಿಕ್ಕೋಡಿ ತಾಲೂಕಿನಲ್ಲಿ ಹರಿಯುತ್ತಿರುವ ದೂಧಗಂಗಾ, ವೇದಗಂಗಾ ನದಿಗಳು ಕಳೆದ ಎರಡು ತಿಂಗಳ ಹಿಂದೆಯೇ ಬತ್ತಿದ್ದವು. ಆದರೆ ಸ್ಥಳೀಯ ಜನಪ್ರತಿನಿ ಧಿಗಳು ಮತ್ತು ರಾಜ್ಯದ ನೀರಾವರಿ ಇಲಾಖೆ ಅಧಿಕಾರಿಗಳು ಕೊಲ್ಲಾಪುರದ ನೀರಾವರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ದೂಧಗಂಗಾ ನದಿಗೆ ನೀರು ಬಿಡಿಸಿಕೊಂಡು ಬಂದಿರುವುದರಿಂದ ಆ ನದಿಗಳಲ್ಲಿ ಇನ್ನೂ ನೀರು ಇದೆ. ಅದೇ ರೀತಿ ಕೃಷ್ಣಾ ನದಿ ನೀರು ಬತ್ತುವ ಮುನ್ನವೇ ಮಹಾರಾಷ್ಟ್ರ ಸರಕಾರದ ಜೊತೆ ಮಾತುಕತೆ ನಡೆಸಿ ನೀರು ಬಿಡಿಸುವ ಕೆಲಸ ಮಾಡಬೇಕೆಂಬುದು ಜನರ ಒತ್ತಾಯವಾಗಿದೆ.

ನದಿ ನೀರು ಖಾಲಿಯಾಗುವ ಮುನ್ನವೇ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ನದಿಗೆ ನೀರು ಬಿಡಿಸಿದರೆ ನದಿ ತೀರದ ರೈತರ ಬಾಳು ಹಸನಾಗುತ್ತದೆ. ಇಲ್ಲವಾದರೆ ನೀರಿನಿಂದ ತೆಗೆದ ಮೀನಿನ ಹಾಗಾಗುತ್ತದೆ ರೈತರ ಜೀವನ. ಆದ್ದರಿಂದ ಅಧಿಕಾರಿಗಳು ನೀರು ಬಿಡಿಸುವ ಕೆಲಸ ಮಾಡಬೇಕು.
ಚಂದ್ರಕಾಂತ ಕಾಗವಾಡೆ
ಪ್ರಗತಿಪರ ರೈತರು.

ಬೇಸಿಗೆ ಕಾಲದಲ್ಲಿ ನದಿ ನೀರು ಖಾಲಿಯಾಗುತ್ತದೆ. ಹೀಗಾಗಿ ನದಿಗೆ ನೀರು ಬಿಡಿಸಬೇಕೆಂದು ನೀರಾವರಿ ಇಲಾಖೆಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಸರ್ಕಾರದ ಮಟ್ಟದಲ್ಲಿ ಕೃಷ್ಣಾ ನದಿಗೆ ನೀರು ಬಿಡುವ ಪ್ರಸ್ತಾಪ ಯಥಾವತ್ತಾಗಿ ನಡೆಯುತ್ತದೆ. ನದಿ ತೀರದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಆನಂದ ಬಣಕಾರ, ಸಹಾಯಕ
ಕಾರ್ಯನಿರ್ವಾಹಕ ಅಭಿಯಂತ
ಗ್ರಾ.ಕು.ನೀ.ಸ ಇಲಾಖೆ ಚಿಕ್ಕೋಡಿ

„ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next