Advertisement

ಕನ್ನಡ ಭಾಷೆ-ಸಂಸ್ಕೃತಿ ಬೆಳೆಸಲು ಕನ್ನಡಿಗರು ಪ್ರಯತ್ನಿಸಲಿ

04:57 PM Dec 01, 2018 | |

ಚಿಕ್ಕೋಡಿ: ಕನ್ನಡ ನಾಡಿನ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಎಲ್ಲ ಕನ್ನಡಿಗರು ಪ್ರಯತ್ನಿಸಬೇಕು. ನಾಡಿನ ಗಡಿಗಳು ಗಟ್ಟಿಯಾಗಿರಬೇಕು. ಗಡಿಜನರು ನಾಡಿನ ಬೇಲಿಗಳಾಗಬೇಕೆಂದು ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿದ್ಯಾವತಿ ಜನವಾಡೆ ಹೇಳಿದರು. ಸಮೀಪದ ಸದಲಗಾ ಪಟ್ಟಣದ ಕನಕ ಭವನದಲ್ಲಿ ಸದಲಗಾದ ಕರ್ನಾಟಕ ರಾಜ್ಯೋತ್ಸವ ಸಮಿತಿ, ಶಿಕ್ಷಣ ಹಾಗೂ ಸಮಾಜ ಸೇವಾ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕನ್ನಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅತಿಥಿಗಳಾದ ಕಲಾವಿದ ಗಣೇಶ ಮೋಪಗಾರ ಮಾತನಾಡಿ, ರಾಜ್ಯೋತ್ಸವ ನ. 1ಕ್ಕೆ ಮಾತ್ರ ಸೀಮಿತಗೊಳ್ಳದೇ ಕನ್ನಡೋತ್ಸವ ನಿತ್ಯೋತ್ಸವ ಆಗಬೇಕು. ಕನ್ನಡ ತಾಯಿಯ ಮಕ್ಕಳಾದ ನಮಗೆ ಎಂದಿಗೂ ಕನ್ನಡವೇ ಉಸಿರಾಗಬೇಕು. ನಾವು ಇಂದು ಅನ್ಯಭಾಷೆಯ, ಪಾಶ್ಚಿಮಾತ್ಯಭಾಷೆಯ ವ್ಯಾಮೋಹಕ್ಕೆ ಒಳಗಾಗದೇ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದ ಸಮಿತಿ ಅಧ್ಯಕ್ಷ ಡಾ| ಕಲ್ಯಾಣಜಿ ಕಮತೆ ಹಾಗೂ ಅತಿಥಿಗಳಾದ ಸಂಕೋನಟ್ಟಿಯ ದಾನಿಗಳಾದ ಮಹಾವೀರ ಪಡನಾಡ ಮಾತನಾಡಿದರು. ಸದಲಗಾ ಗೀತಾಶ್ರಮದ ಡಾ| ಶ್ರದ್ಧಾನಂದ ಸ್ವಾಮೀಜಿ, ಸದಲಗಾದ ದರೀಖಾನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗಿರಗಾಂವದ ಶಿಕ್ಷಕ ಕಲಾವಿದ ಸುಭಾಷ ಸಂಕಪಾಳ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಕೋನಟ್ಟಿಯ ದಾನಿಗಳಾದ ಮಹಾವೀರ ಪಡನಾಡ, ಪತ್ರಕರ್ತ ವಿನಾಯಕ ಮ್ಹೇತ್ರೆ ಯವರಿಗೆ ಗಡಿಯಲ್ಲಿ ಕನ್ನಡ ಸೇವೆಗಾಗಿ, ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡೋತ್ಸವ ಅಂಗವಾಗಿ ಸಾಹಿತಿಗಳಾದ ಡಾ| ಪಿ.ಎಂ.ಭೋಜೆ, ಅರ್ಜುನ ನಿಡಗುಂದೆ, ಡಾ| ಕಲ್ಯಾಣಜಿ ಕಮತೆ, ದೀಕ್ಷಾ ಮೇತ್ರೆ ಇವರಿಂದ ಕವೀಗೋಷ್ಠಿ ನಡೆಯಿತು. ಸದಲಗಾ ಪುರಸಭೆ ಸದಸ್ಯೆ ಲಕ್ಷ್ಮೀ ನಿಡಗುಂದೆ, ಸಮಿತಿ ಅಧ್ಯಕ್ಷ ಡಾ. ಕಲ್ಯಾಣಜಿ ಕಮತೆ, ಉಪಾಧ್ಯಕ್ಷ ಬಾಳು ದೇಸಾಯಿ, ಪಾರೀಸಾ ವಾಘೆ, ಗಂಗಾಧರ ಹಂಚಿನಾಳೆ, ಸುಧಾಕರ ಕಮತೆ, ಬಸವರಾಜ ಕೋಳಿ, ಮಾಯಪ್ಪಾ ಕೋಳಿ, ಸುನೀಲ ದೇಸಾಯಿ, ಮಹೇಶ ಕಮತೆ, ಪ್ರವೀಣ ಕಮತೆ, ವಿನಯ ವಾಘೆ, ಶಾಂತು ಪಾಟೀಲ, ಅರುಣ ಪೋತದಾರ, ಅಕ್ಕಾತಾಯಿ ಪಾಟೀಲ, ಮಹಾಂತೇಶ ನಿಡಗುಂದೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next