Advertisement

ಜನರ ಬಾಯಿ ರುಚಿ ತಣಿಸಿದ ಆಹಾರ ಮೇಳ

09:37 AM Jan 30, 2019 | |

ಚಿಕ್ಕೋಡಿ: ಅಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳಿದ್ದವು. ಕಂಡಲ್ಲೆಲ್ಲ ಘಮಘಮೀಸುವ ಬಣ್ಣ-ಬಣ್ಣದ ವಿವಿಧ ಪದಾರ್ಥಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. ಒಂದೆಡೆ ಜನರು ಗುಂಪು-ಗುಂಪಾಗಿ ಬಾಯಿ ಚಪ್ಪರಿಸಿಕೊಂಡು ದಪಾಟಿ, ಚುಡಾ, ಸಮೋಸಾ, ಬೋಂಡಾ ತಿನ್ನುತ್ತಿದ್ದರೆ, ಮತ್ತೂಂದೆಡೆ ಬಜ್ಜಿ, ಪಾನಿಪುರಿ, ಶೇಂಗಾ ಹೋಳಿಗೆ, ಅವಲಕ್ಕಿ ತಿನ್ನಲು ಜನ ಮುಗಿಬಿದ್ದಿದ್ದರು.

Advertisement

ಹೌದು, ಇಂಥ ದೃಶ್ಯಗಳು ಕಂಡು ಬಂದಿದ್ದು ಸಾಯಿ ಮಂದಿರದ 12ನೆಯ ವಾರ್ಷಿಕೋತ್ಸವದ ಎರಡನೆ ದಿನ ಮಂಗಳವಾರ ನಡೆದ ಆಹಾರ ಮೇಳದಲ್ಲಿ.

ನಗರದ ಸಾಯಿ ಮಂದಿರದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಪಕ್ಕದ ಲೋಕೋಪಯೋಗಿ ಇಲಾಖೆ ಗಾರ್ಡನ್‌ದಲ್ಲಿ ನಡೆದ ಆಹಾರ ಮೇಳದಲ್ಲಿ ನಗರದ ಮಹಿಳೆಯರು ತಮ್ಮ ಕೈ ರುಚಿ ತೋರಿಸಿದರು. ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ಮಾಡಿ ಆಹಾರ ಪ್ರಿಯರ ಬಾಯಲ್ಲಿ ನೀರೂರಿಸಿದರು. ಸುಮಾರು ನೂರಕ್ಕೂ ಹೆಚ್ಚಿನ ಮಹಿಳೆಯರು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು.

ಆಹಾರ ಮೇಳದಲ್ಲಿ ಮಹಿಳೆಯರು ತಯಾರಿಸಿದ್ದ ಮಿಲ್ಕ್ ಶೇಕ್‌, ಢೋಕಳಾ, ಪ್ರೂಟ್ ಕಸ್ಟರ್ಡ್‌, ಹುಬ್ಬಳ್ಳಿ ಗಿರಮಿಟ್, ಅಂಟಿನ ಉಂಡಿ, ಪಾನಿಪುರಿ, ಗೋಬಿಮಂಚೂರಿ, ಮಸಾಲೆ ದೋಸೆ, ಹಣ್ಣಿನ ಸಲಾಡ್‌, ಜ್ಯೂಸ್‌, ಮಜ್ಜಿಗೆ, ಬಜ್ಜಿ, ಬೋಂಡಾ, ವಡಾ-ಪಾವ್‌, ಚುರುಮುರಿ, ಟೋಷ್ಟ, ಸಜ್ಜಿ ರೋಟ್ಟಿ, ಶೇಂಗಾ ಚಟ್ನಿ ಹೀಗೆ ಹತ್ತು ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಿ ನಗರದ ಆಹಾರ ಪ್ರಿಯರ ಬಾಯಿ ರುಚಿ ತಣಿಸಿದರು. ಸಾರ್ವಜನಿಕರು ಕೂಡಾ ಆಹಾರ ಮೇಳದಲ್ಲಿ ಪಾಲ್ಗೊಂಡು ತಿಂಡಿ-ತಿನಿಸುಗಳ ರುಚಿ ನೋಡಿ ಹರ್ಷ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣಾಧಿಕಾರಿ ಎಸ್‌.ಎಲ್‌.ಸವದಿ ಮತ್ತು ವೈದ್ಯ ಡಾ| ಕವಿತಾ ಪಾಟೀಲ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀಣಾ ಕವಟಗಿಮಠ, ಎಸ್‌.ಬಿ. ಮುಲ್ಲಾ, ಗೀತಾ ತಳವಾರ ಮುಂತಾದವರು ಇದ್ದರು.

ನಗರದ ಸಾಯಿ ಮಂದಿರದಲ್ಲಿ ಪ್ರತಿ ವರ್ಷ ಮಹಿಳೆಯರಿಗಾಗಿ ಏರ್ಪಡಿಸಿರುವ ಆಹಾರ ಮೇಳದಲ್ಲಿ ರುಚಿ-ರುಚಿಯಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ವರ್ಷ ಗ್ರಾಮೀಣ ಭಾಗದ ಜನರ ಆಕರ್ಷಣಿಯವಾದ ದಪಾಟಿ, ಮೋಸರು ತಯಾರಿಸಲಾಗಿದೆ. ಈ ಆಹಾರ ಮೇಳ ಆಯೋಜನೆ ಮಾಡುವುದರಿಂದ ಬಗೆ-ಬಗೆಯ ತಿಂಡಿ-ತಿನಿಸು ತಯಾರು ಮಾಡುವುದು ಹೇಗೆ? ಎಂಬುದು ಗೊತ್ತಾಗುತ್ತದೆ. ಇದರಲ್ಲಿ ಪಾಲ್ಗೊಂಡಿರುವುದು ನನಗೆ ಖುಷಿ ತಂದಿದೆ.
• ನಂದಾ ಪೂಜಾರಿ,
ಆಹಾರ ಮೇಳದಲ್ಲಿ ಪಾಲ್ಗೊಂಡ ಮಹಿಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next