ಚಿಕ್ಕೋಡಿ: ಖರ್ಚಿಗೆ ಹಣ ಕೊಡಲಿಲ್ಲವೆಂದು ಪತ್ನಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ ಗಂಡನಿಗೆ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಚಿಕ್ಕೋಡಿ ನಗರದ ಸಂಜಯಗಾಂಧಿ ನಗರದ ಕೊಲೆ ಆರೋಪಿ ಅಜೀತ ಸಾವಳಾ ಮಾಳಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕೈಯಲ್ಲಿ ಯಾವುದೇ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತು ಖರ್ಚಿಗೆ ಹಣ ಕೊಡಬೇಕೆಂದು ತನ್ನ ಪತ್ನಿ ಪಾರ್ವತಿಗೆ ಪದೇ ಪದೇ ಪಿಡಿಸುತ್ತಿದ್ದ ಎನ್ನಲಾಗಿದೆ. ಅದರಂತೆ ಕಳೆದ 2018 ರ ನವೆಂಬರ್ 4 ರಂದು ಪತ್ನಿ ಪಾರ್ವತಿಗೆ ಖರ್ಚಿಗೆ ಹಣ ಕೊಡಬೇಕೆಂದು ಕೇಳಿದಾಗ ಪತ್ನಿ ಹಣವಿಲ್ಲ ಎಂದಿದ್ದಾಳೆ ಈ ವೇಳೆ ಆಕ್ರೋಶಗೊಂಡ ಗಂಡ ಮನೆಯಲ್ಲಿದ್ದ ಕೊಡಲಿಯಿಂದ ಪತ್ನಿ ಪಾರ್ವತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಿನ ಸಿಪಿಐ ಮಲ್ಲನಗೌಡ ನಾಯ್ಕರ ಪ್ರಕರಣ ತನಿಖೆ ನಡೆಸಿ ಅಂತಿಮ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ತನಿಖೆ ನಡೆಸಿದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದ್ದರು.
ಇದನ್ನೂ ಓದಿ: ಇನ್ ಸ್ಟಾಗ್ರಾಂ ಸಂಪರ್ಕ: ವೈದ್ಯ ದಂಪತಿಯ 16 ವರ್ಷದ ಪುತ್ರಿ ಮೇಲೆ ಅತ್ಯಾಚಾರ