ಚಿಕ್ಕೋಡಿ: ಜಾತ್ರೆಯಲ್ಲಿ ವಿಷಾಹಾರ ಸೇವಿಸಿ 44 ಮಂದಿ ಅಸ್ವಸ್ಥವಾಗಿರುವ ಘಟನೆ ಕೇರೂರ ಗ್ರಾಮದಲ್ಲಿ ನಡೆದಿದೆ.
ಕೇರೂರ ಗ್ರಾಮದ ಬೇಕ್ಕೆರಿ ತೋಟದಲ್ಲಿ ಇರುವ ಶ್ರೀ ಬಾಳು ಮಾಮಾ ದೇವಸ್ಥಾನದಲ್ಲಿ ಬುಧವಾರ ಜಾತ್ರೆಯನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಮಧ್ಯಾಹ್ನ ಅನೇಕ ಭಕ್ತರು ಮಹಾಪ್ರಸಾದ ಸೇವಿಸಿದ್ದರು. ಮಧ್ಯಾಹ್ನ ಉಳಿದಿದ್ದ ಅನ್ನವನ್ನೇ ರಾತ್ರಿ ಸೇವಿಸಿದ್ದ ಭಕ್ತರು ವಾಂತಿ,ಭೇದಿಯಿಂದ ಬಳಲುತ್ತಿದ್ದರು.
ಮುಂಜಾನೆಯಿಂದ ಅಸ್ವಸ್ಥವಾಗಿರುವುದರಿಂದ ಚಿಕ್ಕೊಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ 31 ಜನ,ಕೇರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಜನ,ಯಕ್ಸಂಬಾ ಸಾರ್ವಜನಿಕ ಆಸ್ಪತ್ರೆಯಲ್ಲಿ 8 ಮಂದಿಯನ್ನು ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ವಯೋವೃದ್ದರು,ಪುರುಷರು,ಮಹಿಳೆಯರು, ಚಿಕ್ಕಮಕ್ಕಳು ಸಹ ಅಸ್ವಸ್ಥರಾಗಿದ್ದಾರೆ.ಆಸ್ಪತ್ರೆಗೆ ಎಡಿಎಚ್ಓ ಎಸ್.ಎಸ್.ಗಡೇದ,ತಾಲೂಕು ಆರೋಗ್ಯಧಿಕಾರಿ ಸುಕಮಾರ ಭಾಗಾಯಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.
ಚಿಕ್ಕೋಡಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಮಹೇಶ ನಾಗರಬೇಟ ಮಾತನಾಡಿ, ‘ಕೇರೂರ ಗ್ರಾಮದಲ್ಲಿ ಜಾತ್ರೆಯಲ್ಲಿ ವಿಷಾಹಾರ ಸೇವಿಸಿ 44 ಜನರು ಅಸ್ವಸ್ಥಗೊಂಡಿದ್ದರು.ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಸದ್ಯ ಎಲ್ಲ ರೋಗಿಗಳ ಆರೋಗ್ಯ ಚೇತರಿಸಿಕೊಂಡಿದ್ದಾರೆ’ ಎಂದರು.