ಚಿಕ್ಕಮಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಆಯವ್ಯಯ ಜಿಲ್ಲೆಯ ಪಾಲಿಗೆ ಸಂಪೂರ್ಣ ನಿರಾಶಾದಾಯಕವಾಗಿದೆ ಎಂಬ ಕೂಗು ಕೇಳಿಬಂದಿದೆ.
ಪ್ರಕೃತಿ ವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಾಫಿ, ಮೆಣಸು ಬೆಳೆಗಳ ಪುನಃಶ್ಚೇತನಕ್ಕೆ ಕೇಂದ್ರ ಸರ್ಕಾರ ಯಾವುದಾದರೂ ಕೊಡುಗೆ ನೀಡಬಹುದು. ಬೆಲೆ ಕುಸಿತದಿಂದಾಗಿ ತೊಂದರೆಗೆ ಸಿಲುಕಿರುವ ಬೆಳೆಗಾರರ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದರು. ಈ ವಿಚಾರವಾಗಿ ಬೆಳೆಗಾರರ ನಿಯೋಗ ಹಣಕಾಸು ಸಚಿವರಿಗೆ ಮನವಿಯನ್ನೂ ಸಲ್ಲಿಸಿತ್ತು. ಆದರೆ, ಬಜೆಟ್‌ನಲ್ಲಿ ಈ ವಿಚಾರದ ಕುರಿತು ಪ್ರಸ್ತಾಪವೇ ಆಗಿಲ್ಲ ಎನ್ನಲಾಗುತ್ತಿವೆ.
ಸಾರ್ಕ್ ಒಪ್ಪಂದದ ಹೆಸರಿನಲ್ಲಿ ಅಕ್ರಮವಾಗಿ ಆಮದಾಗುತ್ತಿರುವ ಮೆಣಸನ್ನು ತಡೆಗಟ್ಟುವ ನಿಟ್ಟಿನಲ್ಲೂ ಯಾವುದೇ ಪ್ರಸ್ತಾಪ ಮಾಡಿಲ್ಲ. ಕಾಫಿ, ಮೆಣಸು ಮಾತ್ರವಲ್ಲದೇ, ಅಡಕೆ ಬೆಳೆ ಕುರಿತೂ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಸಾಲಮನ್ನಾ ಮಾಡದಿದ್ದರೂ ಪರವಾಗಿಲ್ಲ. ಕನಿಷ್ಠ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆಯನ್ನಾದರೂ ಘೋಷಿಸ ಬಹುದಾಗಿತ್ತು. ಅದನ್ನೂ ಮಾಡಿಲ್ಲ ಎಂಬ ಅಸಮಾಧಾನವನ್ನು ಕಾಫಿ ಬೆಳೆಗಾರರು ಹೊರಹಾಕುತ್ತಿದ್ದಾರೆ.
ರೈಲ್ವೆ ವಿಚಾರದಲ್ಲೂ ಯಾವುದೇ ಘೋಷಣೆ ಆಗಿಲ್ಲ. ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಗೂಡ್ಸ್ ಇಳಿಸಲು ಗೋದಾಮು, ಹೆಚ್ಚುವರಿ ರೈಲು ಓಡಿಸುವುದು, ಚಿಕ್ಕಮಗಳೂರಿನಿಂದ ಬೇಲೂರು ಮೂಲಕ ಹಾಸನಕ್ಕೆ ರೈಲ್ವೆ ಯೋಜನೆಯ ಕುರಿತೂ ಚಕಾರವೆತ್ತಿಲ್ಲ.
ಹೆಚ್ಚಿನ ಪ್ರಮಾಣದ ಕಾರ್ಮಿಕರನ್ನು ಹೊಂದಿರುವ ಕಾಫಿ ನಾಡು ಚಿಕ್ಕಬಳ್ಳಾಪುರ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಈ ಬಾರಿಯೂ ಈಡೇರಿಲ್ಲ ಎಂಬ ಕೊರಗು ಇಲ್ಲಿನ ಜನರದ್ದಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆಯೂ ದೊರೆತಿಲ್ಲ ಎಂಬ ಬೇಸರ ಎಲ್ಲಡೆ ವ್ಯಕ್ತವಾಗಿದೆ.