ಕಾಸ್ಟ್ಯೂಮ್ ಡಿಸೈನರ್ ಆಗಿರುವ ಜೊತೆಗೆ 40ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿರುವ ಲೇಖಕಿ ದೇವಿಕಾ ಜನಿತ್ರಿ ಬರೆದಿದ್ದ “ಚಿಕ್ಕಿಯ ಮೂಗುತಿ’ ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ದೇವಿಕಾ ಜನಿತ್ರಿ ಅವರೇ ತಮ್ಮ ಕಾದಂಬರಿಗೆ ಸಿನಿಮಾ ರೂಪ ಕೊಟ್ಟಿದ್ದು, “ಚಿಕ್ಕಿಯ ಮೂಗುತಿ’ ಹೆಸರಿನಲ್ಲೇ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.
ಅಂದಹಾಗೆ “ಚಿಕ್ಕಿಯ ಮೂಗುತಿ’ ಹೆಸರೇ ಹೇಳು ವಂತೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆಯ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಈ ಸಿನಿಮಾದ ನಿರ್ಮಾಣ, ನಿರ್ದೇಶನ ಸೇರಿದಂತೆ ಬಹುತೇಕ ಎಲ್ಲ ವಿಭಾಗಗಳಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿ ನಿಂತು ಈ ಸಿನಿಮಾ ಮಾಡಿದ್ದಾರೆ.
ನಟಿ ತಾರಾ ಅನುರಾಧಾ, ಶ್ವೇತಾ ಶ್ರೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಮೊದಲಾದವರು “ಚಿಕ್ಕಿಯ ಮೂಗುತಿ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪೊ›ಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ “ಚಿಕ್ಕಿಯ ಮೂಗುತಿ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ “ಚಿಕ್ಕಿಯ ಮೂಗುತಿ’ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟಿ ತಾರಾ, “ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೆ ಮೀಸಲಾತಿ ಇದೆ. ಎಲ್ಲರೂ ಹೆಣ್ಣು ಮಕ್ಕಳೆ ಸೇರಿಕೊಂಡು ಮಾಡಿರುವ ಸಿನಿಮಾ, ಅದ್ಭತವಾಗಿ ಸಿನಿಮಾ ಮೂಡಿಬಂದಿ. ದೇವಿಕಾ ಅವರ ಮೊದಲು ಸಿನಿಮಾ ಅಂತ ಅನಿಸುವುದೇ ಇಲ್ಲ, ಉತ್ತಮವಾಗಿ ಮೂಡಿಬಂದಿದೆ’ ಎಂದು ಹೇಳಿದರು.
ಇನ್ನು ನಟಿ ಶ್ವೇತಾ ಮಾತನಾಡಿ, ‘ಮಗುವಿಗೆ ಜನ್ಮ ನೀಡಿದ ಬಳಿಕ ನಟನೆ ಮಾಡಿದ ಮೊದಲ ಸಿನಿಮಾ’ ಎಂದು ಹೇಳಿದರು.
ನಟಿ ಭವಾನಿ ಪ್ರಕಾಶ್, ನಟರಾದ ತಬಲ ನಾಣಿ ಕೂಡ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು. “ಜನಿತ್ರಿ ಪೋ›ಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಚಿಕ್ಕಿಯ ಮೂಗುತಿ’ ಸಿನಿಮಾದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿ ಸಿದ್ದು, ವೆಂಕಟೇಶ್ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ನಿಧಾನವಾಗಿ “ಚಿಕ್ಕಿಯ ಮೂಗುತಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.