ಹಲವು ವರ್ಷಗಳ ಕಾಲ ಕಾಮಿಡಿ ಪಾತ್ರಗಳನ್ನು ಮಾಡಿಕೊಂಡು ಬಂದ ನಟರು, ನಂತರದ ದಿನಗಳಲ್ಲಿ ಹೀರೋ ಆಗಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಚಿಕ್ಕಣ್ಣ.
ಕಾಮಿಡಿ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ಚಿಕ್ಕಣ್ಣ ಈಗ ಹೀರೋ ಆಗಿದ್ದಾರೆ. ಅದು “ಉಪಾಧ್ಯಕ್ಷ’ ಚಿತ್ರದ ಮೂಲಕ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ಹೊಸ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸುತ್ತಿದ್ದಾರೆ.
ಅನಿಲ್ ಈ ಚಿತ್ರದ ನಿರ್ದೇಶಕರು. ಆರಂಭದಲ್ಲಿ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸುತ್ತಾರೆಂದು ಹೇಳಲಾಗಿತ್ತು. ಈಗ “ಉಪಾಧ್ಯಕ್ಷ’ ಜವಾಬ್ದಾರಿ ಅನಿಲ್ ಹೆಗಲೇರಿದೆ. ಚಿತ್ರದ ಬಗ್ಗೆ ಮಾತನಾಡುವ ಅನಿಲ್, “ಇದು ಅಧ್ಯಕ್ಷ ಚಿತ್ರದ ಮುಂದುವರೆದ ಭಾಗ. ಆ ಚಿತ್ರ ಎಲ್ಲಿಗೆ ನಿಂತಿತ್ತೋ, ಇದು ಅಲ್ಲಿಂದಲೇ ಶುರುವಾಗುತ್ತದೆ. ತರುಣ್, ನಂದಕಿಶೋರ್ ಸೇರಿದಂತೆ ಐದಾರು ಮಂದಿ ಸೇರಿ ಈ ಕಥೆ ಸಿದ್ಧಪಡಿಸಿದ್ದೇವೆ. ಅಧ್ಯಕ್ಷ ಚಿತ್ರದ ಕೆಲವು ಪಾತ್ರಗಳು ಇಲ್ಲೂ ಮುಂದುವರೆದಿವೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ’ ಎಂದರು.
ಇದನ್ನೂ ಓದಿ:ಕಲರ್ ಫುಲ್ ಇವೆಂಟ್ನಲ್ಲಿ ತ್ರಿವಿಕ್ರಮ
ಇನ್ನು, ಚಿಕ್ಕಣ್ಣ ಅವರಿಗೆ ಈ ಹಿಂದೆಯೇ ಹೀರೋ ಆಗುವಂತೆ ಅವಕಾಶಗಳು ಬಂದಿದ್ದವಂತೆ. ಆದರೆ ಈಗ “ಉಪಾಧ್ಯಕ್ಷ’ ಮೂಲಕ ಹೀರೋ ಆಗಿದ್ದಾರೆ.
“ಇಲ್ಲಿ ನಾನು ಹೀರೋ ಅನ್ನುವುದಕ್ಕಿಂತ ಕಾಮಿಡಿ ಪಾತ್ರ ಮಾಡುತ್ತಿದ್ದೇನೆ. ಬೇರೆ ಹೀರೋಗಳ ಸಿನಿಮಾಗಳಲ್ಲಿ 15 ದೃಶ್ಯಗಳು ನನಗೆ ಸಿಗುತ್ತಿತ್ತು. ಇಲ್ಲಿ 40 ದೃಶ್ಯಗಳು ಸಿಗಬಹುದು. ಬೇರೆ ಬೇರೆ ನಟರನ್ನು ಹತ್ತಿರದಿಂದ ನೋಡಿ ಕಲಿಯುತ್ತಿದ್ದೇನೆ’ ಎನ್ನುವುದು ಚಿಕ್ಕಣ್ಣ ಮಾತು. ಚಿತ್ರಕ್ಕೆ ಮಲೈಕಾ ನಾಯಕಿ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ನಿರ್ಮಾಪಕರು ಇದೇ ವರ್ಷ ಸಿನಿಮಾ ಬಿಡುಗಡೆ ಮಾಡಲಿದ್ದಾರಂತೆ.