Advertisement

ಚಿಕ್ಕನಾಯಕನಹಳ್ಳಿ; ಸಚಿವ ಮಾಧುಸ್ವಾಮಿಗೆ ಬಾಬು, ಕಿರಣ್‌ ಸವಾಲು

12:05 AM Mar 21, 2023 | Team Udayavani |

ಚಿಕ್ಕನಾಯಕನಹಳ್ಳಿ: ಅರೆ ಮಾಲೆನಾಡು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ಟಿಕೆಟ್‌ ಫೈಟ್‌ ತಕ್ಕ ಮಟ್ಟಿಗೆ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್‌ ಹೊರತು ಪಡಿಸಿದರೆ ಜೆಡಿಎಸ್‌, ಬಿಜೆಪಿಯ ಹುರಿಯಾಳುಗಳು ಯಾರು ಎಂಬ ಸ್ಪಷ್ಟ ಚಿತ್ರಣ ಈಗಾಗಲೇ ಕ್ಷೇತ್ರದಲ್ಲಿ ಗೋಚರವಾಗಿದೆ.
ರಾಜ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಜೆ.ಸಿ. ಮಾಧುಸ್ವಾಮಿಗೆ ಮಾಜಿ ಶಾಸಕ, ಜೆಡಿಎಸ್‌ ಘೋಷಿತ ಅಭ್ಯರ್ಥಿ ಸಿ.ಬಿ.ಸುರೇಶ್‌ ಬಾಬು, ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಕೆ.ಎಸ್‌.ಕಿರಣ್‌ಕುಮಾರ್‌ ಠಕ್ಕರ್‌ ಕೊಡಲು ಸಿದ್ಧವಾಗುತ್ತಿದ್ದು, ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ.

Advertisement

ಕ್ಷೇತ್ರದಲ್ಲಿ ನಡೆದ ಜೆಡಿಎಸ್‌ನ ಪಂಚರತ್ನ ಯಾತ್ರೆ ವೇಳೆ ಮಾಜಿ ಸಿಎಂ, ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ಅಭ್ಯರ್ಥಿ ಸಿ.ಬಿ.ಸುರೇಶ್‌ ಬಾಬು ಎಂದು ಬಹಿರಂ ಗವಾಗಿಯೇ ಘೋಷಣೆ ಮಾಡಿದ್ದರು. ಹೀಗಾಗಿ, ಆ ಪಕ್ಷದಲ್ಲಿ ಟಿಕೆಟ್‌ಗೆ ಯಾವುದೇ ಫೈಟ್‌ ಇಲ್ಲ ಮತ್ತು ಈವರೆಗೂ ಯಾರೂ ಟಿಕೆಟ್‌ಗಾಗಿ ಪ್ರಯತ್ನ ನಡೆಸಿಲ್ಲ.

ಹೀಗಾಗಿ ಸುರೇಶ್‌ ಬಾಬು ನಿರಾಯಾಸವಾಗಿ ಪ್ರಚಾರ ನಡೆ ಸುತ್ತಿದ್ದಾರೆ. ಕೈ ಟಿಕೆಟ್‌ಗೆ 9 ಮಂದಿ ಅರ್ಜಿ: ಹಲವು ದಶಕಗಳಿಂದ ಕ್ಷೇತ್ರದಲ್ಲಿ ನೆಲಕಚ್ಚಿದ ಕಾಂಗ್ರೆಸ್‌ ಪಕ್ಷ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಡೆಸಿದ ಜೋಡೋ ಯಾತ್ರೆಯಿಂದ ಮೇಲೆ ಏಳುವಂತಾಯಿತು. ಇದನ್ನು ಕಂಡ ಬೆಂಗಳೂರಿನಲ್ಲಿದ್ದ ಕೆಲ ಕಾಂಗ್ರೆಸ್‌ ಮುಖಂಡರು ಟಿಕೆಟ್‌ಗಾಗಿ ಚಿಕ್ಕನಾಯಕನಹಳ್ಳಿಗೆ ಬಂದರು. ಹೊರಗಿನವರು ಹಾಗೂ ಸ್ಥಳೀಯರ ಮುಖಂಡರ ಸಹಿತ ಬರೊಬ್ಬರಿ 9 ಮಂದಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಡಾ| ಪರಮೇಶ್ವರಪ್ಪ, ಜಗದೀಶ್‌, ಡಾ| ವಿಜಯ ರಾಘವೇಂದ್ರ, ಬಿ.ಲಕ್ಕಪ್ಪ, ವೈ.ಸಿ.ಸಿದ್ದರಾಮಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಕೈ ಟಿಕೆಟ್‌ ಆಕಾಂಕ್ಷಿಗಳಿಗೆ ಕಿರಣ್‌ ಶಾಕ್‌: ಬಿಜೆಪಿಯಲ್ಲಿದ್ದ ಕೆ.ಎಸ್‌.ಕಿರಣ್‌ಕುಮಾರ್‌ ದಿಢೀರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗಿದ್ದರಿಂದ ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ 9 ಮಂದಿ ಕಾಂಗ್ರೆಸ್‌ ಮುಖಂಡರಿಗೆ ಬಿಗ್‌ ಶಾಕ್‌ ಆಗಿದೆ. ಅಷ್ಟೇ ಅಲ್ಲ ಕಿರಣ್‌ಕುಮಾರ್‌ಗೆà ಪಕ್ಷದ ಟಿಕೆಟ್‌ ಸಿಗುವ ಸಾಧ್ಯತೆ ಇರುವ ಕಾರಣ, ಕೈ ಟಿಕೆಟ್‌ ಆಕಾಂಕ್ಷಿಯಾಗಿದ್ದ ಧನಂಜಯ ಇದೀಗ ಜೆಡಿಎಸ್‌ಗೆ ಸೇರ್ಪಡೆ ಆಗಿದ್ದಾರೆ. ಉಳಿದವರು ಪಕ್ಷದ ಹೆಸರಿನಲ್ಲಿ ಪ್ರಚಾರ ನಡೆಸುತ್ತಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್‌ ಸಿಗುತ್ತದೆ ಕಾದು ನೋಡಬೇಕು.

ಮಾಧುಸ್ವಾಮಿಗೆ ಪ್ರಬಲ ಆಕಾಂಕ್ಷಿ: ಬಿಜೆಪಿ ಟಿಕೆಟ್‌ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಮಾಜಿ ಶಾಸಕ ಕೆ.ಎಸ್‌.ಕಿರಣ್‌ಕುಮಾರ್‌, ಕಳೆದ ಐದು ವರ್ಷಗಳಿಂದಲೂ ಚುನಾವಣೆಗಾಗಿ ಸಾಕಷ್ಟು ತಯಾರಿ ನಡೆಸಿ, ಕ್ಷೇತ್ರಾದ್ಯಂತ ಸಭೆ, ಸಮಾರಂಭಗಳು, ಶಿಬಿರಗಳು ನಡೆಸುತ್ತಿದ್ದರು. ಆದರೆ ಬಿಜೆಪಿ ನಾಯಕರು ಹಾಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಪರ ಬ್ಯಾಟ್‌ ಬೀಸಿದ ಹಿನ್ನೆಲೆಯಲ್ಲಿ, ಬಿಜೆಪಿ ಟಿಕೆಟ್‌ ಸಿಗುವುದಿಲ್ಲ ಎಂಬ ಖಾತ್ರಿಯಾದ ತಕ್ಷಣ, ಕೆಲ ಮೂಲ ಬಿಜೆಪಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಇದರೊಂದಿಗೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್‌ ವಿಚಾರದಲ್ಲಿ ಇದ್ದ ಕಂಟಕ ದೂರವಾಯಿತು. ಜತೆಗೆ ಚುನಾವಣೆಯಲ್ಲಿ ಪ್ರಬಲ ಎದುರಾಳಿ ಹುಟ್ಟಿಕೊಂಡಂತೆ ಆಯಿತು.

Advertisement

ಒಟ್ಟಾರೆ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಮಧ್ಯೆ ನಡೆಯುತ್ತಿದ್ದ ಚುನಾವಣೆ ಯುದ್ಧದಲ್ಲಿ ಈಗ ಕಿರಣ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆಯಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಯೋಧ ಕ್ಯಾಪ್ಟನ್‌ ಸೋಮಶೇಖರ್‌, ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಯಾಗಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್‌ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಸಚಿವ ಮಾಧುಸ್ವಾಮಿ
ಮತ ಕೂಡಿಡುವ ಒತ್ತಡ
ಮಾಜಿ ಶಾಸಕ ಕಿರಣ್‌ಕುಮಾರ್‌ ಕೆಲ ಮೂಲ ಬಿಜೆಪಿಗರೊಂದಿಗೆ ಕಾಂಗ್ರೆಸ್‌ ಸೇರ್ಪಡೆ ಆಗಿರುವುದರಿಂದ ಸಚಿವ ಮಾಧುಸ್ವಾಮಿಗೆ ಬಿಜೆಪಿಯ ಓಟು ಕೂಡಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲ ಮಾಧುಸ್ವಾಮಿ, ಕಿರಣ್‌ಕುಮಾರ್‌ ಲಿಂಗಾಯತರಾಗಿದ್ದು, ಆ ಸಮುದಾಯದ ಮತ ಹಂಚಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಕಳೆದ ಚುನಾವಣೆಗಳಲ್ಲಿ ಕಿರಣ್‌ಕುಮಾರ್‌ ಸೋತಿರುವ ಕಾರಣ ಅನುಕಂಪ, ಅಹಿಂದ ಮತ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ ಇದೆ. ಒಟ್ಟಾರೆ ಈವರೆಗೆ ಕೇವಲ ಬಿಜೆಪಿ-ಜೆಡಿಎಸ್‌ ನಡುವೆ ಇದ್ದ ಫೈಟ್‌, ಕಿರಣ್‌ಕುಮಾರ್‌ ಕಾಂಗ್ರೆಸ್‌ ಸೇರ್ಪಡೆಯಿಂದ ಮಾಧುಸ್ವಾಮಿಗೆ ಮತ್ತೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡಂತೆ ಆಗಿದೆ.

-ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next