Advertisement

UV Fusion: ಚೊಕ್ಕವಾಗಿ ಹಾಸುಹೊಕ್ಕಾಗಿರುವ ಕಲೆಯೇ ಚಿಕ್ಕಮೇಳ

03:40 PM Oct 09, 2023 | Team Udayavani |

ಪರಶುರಾಮನಿಂದ ಸೃಷ್ಟಿಸಲ್ಪಟ್ಟ ಗಂಡು ಮೆಟ್ಟಿದ ನಾಡು ಈ ತುಳುನಾಡು. ಮಣ್ಣಿನ ಪ್ರತಿ ಕಣಕಣದಲ್ಲೂ ಕೂಡ ಕಲೆ ಅಡಕವಾಗಿದೆ. ಅಂತಹ ಕಲೆಗಳಲ್ಲಿ  ಒಂದು ದೇಶ ವಿದೇಶಗಳಲ್ಲಿ ವಿಜೃಂಭಿಸುತ್ತಿರುವ ಯಕ್ಷಗಾನ. ಹಿಂದಿನ ಕಾಲದಿಂದಲೂ ಯಕ್ಷಗಾನದ ಕಲಾವಿದರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಕಲೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯಕ್ಷಗಾನಕ್ಕೆ ತನ್ನದೇ ಆದ ಇತಿಹಾಸ ಇದೆ. ಅದಕ್ಕೊಂದು ತನ್ನದೇ ಆದ ಚೌಕಟ್ಟು ಇದೆ. ಹಿರಿಯ ಕಲಾವಿದರು ಅನುಸರಿಸಿ ಬಂದಂತಹ ಪದ್ಧತಿಯನ್ನು ಇಂದು  ಗ್ರಂಥವಾಗಿ ಮಾನ್ಯತೆ ಪಡೆದಿದೆ ಅದೆಷ್ಟೋ ಕಲಾ ಪರಂಪರೆಗಳು ಜನಜೀವನದಲ್ಲಿ ಹಾಸುಹೊಕ್ಕಗಿದೆ. ಇವುಗಳಲ್ಲಿ ಚಿಕ್ಕಮೇಳವೂ ಒಂದು.

Advertisement

ಚಿಕ್ಕಮೇಳ, ಕಂಗೀಲು ಕರಂಗೋಲು, ಸೋಣಂತ ಜೋಗಿ, ಆಟಿ ಕಳೆಂಜ , ಮದಿಮಾಯೆ ಮದಿಮಾಲ್, ಕನ್ಯಾಪು ಚಿನ್ನು ಕುಣಿತ, ಗೌಡರ ಸಿದ್ಧವೇಷ, ಬಾಳ್‌ ಸಾಂತು ಮೊದಲಾದವುಗಳು ಇಂದಿನ ಪರಿವರ್ತನಾಶೀಲ ಜೀವನ ಕ್ರಮದಿಂದ ಜನ ಮಾನಸದಿಂದಾಗಿ ಕಣ್ಮರೆಯಾಗುತ್ತಿದೆ. ಪುರಾತನ ಇತಿಹಾಸವಿರುವ ಯಕ್ಷಗಾನವನ್ನು ಮನೆ -ಮನಗಳಿಗೆ ತಲುಪಿಸಬೇಕೆನ್ನುವ ಚಿಂತನೆಯ ಫಲಶ್ರುತಿಯೇ ಮನೆ – ಮನ ಯಕ್ಷಗಾನ ತಂಡ ಅಥವಾ ಚಿಕ್ಕಮೇಳ. ‌

ಹಲವಾರು ವರ್ಷಗಳ ಹಿಂದೆ ಆರು ಅಥವಾ ಏಳು ಜನರ ತಂಡದ ಚಿಕ್ಕಮೇಳ ಇತ್ತೆಂಬುದು ಪ್ರತೀತಿ. ಅದನ್ನೇ ಹೆಚ್ಚಿನ ಕಲಾವಿದರನ್ನು ಸೇರಿಸಿ ಈಗಿನ ವೃತ್ತಿ ಮೇಳಗಳನ್ನಾಗಿ ಪರಿವರ್ತಿಸಿದರು. ವೃತ್ತಿ ಮೇಳಗಳ ತಿರುಗಾಟ ಪತ್ತಾನಾಜೆ ಯಂದು ಕೊನೆಗೊಳ್ಳುತ್ತದೆ ಆದರೆ ಮೇಳದ ದೇವರಿಗೆ ಪೂಜೆ ನಡೆಯಲೇಬೇಕು. ಹಾಗಾಗಿ ಚಿಕ್ಕಮೇಳ ಪ್ರಾರಂಭವಾಯಿತು. ಚಿಕ್ಕಮೇಳವು ವಾರಪೂರ್ತಿವಿಯಿದ್ದು ನಿಗದಿತ ಸಮಯ ಮತ್ತು ಯಾವುದೇ ಒಂದು ಸ್ಥಳಕ್ಕೆ ಸೀಮಿತವಾಗಿರದೇ ಆದಷ್ಟು ಎಲ್ಲ ಪ್ರದೇಶಗಳಿಗೆ ತೆರಳುತ್ತಾರೆ.

ವೃತ್ತಿ ಕಲಾವಿದರಿಗೆ ಯಕ್ಷಗಾನದಲ್ಲಿ ಅನುಭವವಿದ್ದು, ಅವರು ನಾಟ್ಯಗಳಲ್ಲಿ ಪ್ರವೀಣರಾಗಿರುತ್ತಾರೆ, ಆದರೆ ಸಣ್ಣ ಯುವ ಕಲಾವಿದರು ನಾಟ್ಯಗಳಲ್ಲಿ ಪ್ರವೀಣರಾಗಿರುವುದಿಲ್ಲ ಅವರ ನಾಟ್ಯ ಕಲಿಕೆ ನಿಲ್ಲಬಾರದೆಂದು ಅವರನ್ನು ಪ್ರವೀಣರನ್ನಾಗಿಸಲು ಚಿಕ್ಕಮೇಳಗಳಲ್ಲಿ ಅವರನ್ನು ಅಳವಡಿಸಿಕೊಳ್ಳಲಾಗುತ್ತದೆ.

Advertisement

ಹಿಂದೆ ಯಕ್ಷಗಾನ ಕಲಾವಿದರಿಗೆ ಅಷ್ಟೊಂದು ಸಂಭಾವನೆ ಇಲ್ಲದ ಕಾರಣ ಜೀವನ ನಡೆಸಲು ಅವರು ಮಳೆಗಾಲದಲ್ಲಿ ತಿರುಗಾಟವನ್ನು ನಡೆಸುತ್ತಿದ್ದರು.ಹಾಗಾಗಿ ಮಳೆಗಾಲದ ತಿರುಗಾಟ ಎಂದು ಕೂಡ ಕರೆಯುತ್ತಿದ್ದರು.ಅದು ನಂತರದ ದಿನಗಳಲ್ಲಿ ಚಿಕ್ಕಮೇಳವಾಯಿತು ಅವರಿಗೆ ದೊರೆಯುತ್ತಿದ್ದ ಅಕ್ಕಿ, ಹಣ್ಣು, ಹಂಪಲು, ಹಣ ಇವುಗಳನ್ನು ಹಂಚಿಕೊಂಡು ಜೀವನವನ್ನು ನಡೆಸುತ್ತಿದ್ದರು, ಆದರೆ ಈಗಿನ ಚಿಕ್ಕಮೇಳಗಳು ತಮಗೆ ದೊರೆಯುವ ಮೊತ್ತದಿಂದ ಬಡವರಿಗೆ ಅಂಗವಿಕಲರಿಗೆ ದಾನವಾಗಿ ನೀಡುತ್ತಾರೆ.

ಮೇಳಗಳ ದೇವರಿಗೆ ಪೂಜೆಯು ನಡೆಯಬೇಕದ ಕಾರಣ ಮತ್ತು ಕೆಲವು ಜನರುಗಳಿಗೆ ದೊಡ್ಡ ಮೇಳಗಳ ಸೇವೆಯನ್ನು ನೆರವೇರಿಸಲು  ಸಾಧ್ಯವಾಗದಿದ್ದವರು ಮನೆ ಮನೆಗೆ ಬರುವ ಚಿಕ್ಕಮೇಳವನ್ನು ಪೂಜಿತಾಭಾವದಿಂದ ನೋಡುತ್ತಾರೆ, ಆರಾಧಿಸುತ್ತಾರೆ.ಚಿಕ್ಕಮೇಳಗಳು ಮನೆ – ಮನೆಗಳಿಗೆ ಬಂದಾಗ ದೇವರ ಮೂರ್ತಿಯನ್ನು ತರುವುದರಿಂದ ತಮ್ಮ ತಮ್ಮ ಮನಸ್ಸಿನಲ್ಲಿರುವ ಪ್ರಾರ್ಥನೆಯನ್ನು ಸಲ್ಲಿಸಿ  ಸೇವೆಯನ್ನು ಕೈಗೊಳುತ್ತಾರೆ.

ಹಿಂದಿನ ಕಾಲದಲ್ಲಿ ಮನೆಗಳಲ್ಲಿ ದೋಷವನ್ನು ದೂರ ಮಾಡಲು ಚಿಕ್ಕಮೇಳವನ್ನು ಕರೆಸಿ ಆಡಿಸುತ್ತಿದ್ದರು. ಯಕ್ಷಗಾನ ಗೆಜ್ಜೆ ಸೇವೆಯ ಸಂದರ್ಭದಲ್ಲಿ ಹೊರ ಹೊಮ್ಮುವ ನಾದ ತರಂಗದಿಂದ ಮನೆ ಮತ್ತು ಮನದ ದೋಷಗಳು ಪರಿಹಾರ ಆಗುವುದೆಂಬ  ನಂಬಿಕೆ ನಮ್ಮ ಹಿರಿಯರದ್ದಾಗಿತ್ತು. ಏನೇ ಇರಲಿ ನಮ್ಮ ಸಂಪ್ರದಾಯ, ಪದ್ಧತಿ, ಆಚಾರ – ವಿಚಾರಗಳು ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ಸಂಗತಿಯಾಗಿದ್ದು, ಅದನ್ನು ಉಳಿಸಿ ಮುಂದಿನ ತಲೆಮಾರಿಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ.

-ಶ್ರಾವ್ಯಪ್ರಭು ಎ.

ವಿವೇಕಾನಂದ ಸ್ವಾಯತ್ತ ಕಾಲೇಜು

ನೆಹರೂ ನಗರ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next