Advertisement

ಏತ ನೀರಾವರಿ ಯೋಜನೆಗೆ ಕಾಯಕಲ್ಪ

11:34 AM Jul 05, 2019 | Team Udayavani |

ಚಿಕ್ಕಮಗಳೂರು: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿರಂಜಿ ಹಳ್ಳದಿಂದ ಸುಮಾರು 1,480 ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಪುನಃ ಆರಂಭವಾಗುವ ಲಕ್ಪ್ಷಣಗಳು ಕಂಡು ಬಂದಿವೆ.

Advertisement

ಮಳಲೂರು ಏತ ನೀರಾವರಿ ಕಾಮಗಾರಿ 1998ನೇ ಸಾಲಿನಲ್ಲಿ ಮಂಜೂರಾಗಿ ಆರಂಭಗೊಂಡಿತಾದರೂ, ನಂತರ ಬದಲಾದ ರಾಜಕೀಯ ಪರಿಸ್ಥಿತಿಗಳಿಂದಾಗಿ ಕಳೆದ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬದಲು ನೇರವಾಗಿ ಖರೀದಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಿದೆ. ಈ ರೀತಿಯ ನೇರ ಖರೀದಿಗೆ ರೈತರು ಸಹಮತ ವ್ಯಕ್ತಪಡಿಸಿದ್ದು, ನಿಗಮ ಸಹ ಇದಕ್ಕೆ ಒಪ್ಪಿದಲ್ಲಿ ಶೀಘ್ರವೇ ಭೂಮಿ ಖರೀದಿಸಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದಾಗಿದೆ.

ಸಣ್ಣ ನೀರಾವರಿ ಇಲಾಖೆ ಮೊದಲು ಈ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ, ಹಣದ ಕೊರತೆಯಿಂದಾಗಿ ಇಲಾಖೆ ಕಾಮಗಾರಿಯನ್ನು ಕೈಬಿಟ್ಟಿತ್ತು. ಇದುವರೆಗೂ ಸುಮಾರು 42 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿದೆ. ಜಾಕ್‌ವೆಲ್, ಇನ್‌ಟೇಕ್‌ವೆಲ್, ರೈಸಿಂಗ್‌ ಮೇನ್‌, ಪಂಪ್‌ಹೌಸ್‌ ಪೈಪ್‌ ಅಳವಡಿಕೆ ಕಾಮಗಾರಿಗಳನ್ನು ಮಾಡಲಾಗಿದೆ.

ನಂತರ ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾಮಗಾರಿಯನ್ನು ಪುನಃ ಆರಂಭಿಸಲಾಗಿತ್ತು. ಕಂಬಿಹಳ್ಳಿಯಲ್ಲಿ ಬಾಕಿ ಇದ್ದ 60ಮೀ. ವಿಸ್ತೀರ್ಣದ ಚಾನಲ್ ಕಾಮಗಾರಿ ಪೂರ್ಣಗೊಂಡಿದೆ. ತಗಡೂರು ಗ್ರಾಮದಲ್ಲಿ ಚಾನಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲನೇ ಹಂತದ ಜಾಕ್‌ವೆಲ್ ಪಂಪ್‌ಹೌಸ್‌ ಕಾಂಕ್ರೀಟ್ ಕಾಮಗಾರಿ ಆರಂಭಗೊಂಡಿತ್ತು. ಅಲ್ಲದೇ, 12ಕಿ.ಮೀ. ಉದ್ದದ ನಾಲೆ ಕಾಮಗಾರಿಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸ ಬಾಕಿ ಉಳಿದಿತ್ತು. ಇದಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಮಾಡಲಾಗಿದೆ. ಕಂಬಿಹಳ್ಳಿ, ಬಿಗ್ಗನಹಳ್ಳಿ, ತಗಡೂರು, ಮಳಲೂರು, ಕದ್ರಿಮಿದ್ರಿ, ಕಲ್ಲಹಳ್ಳಿ ಗ್ರಾಮಗಳಲ್ಲಿ ಸುಮಾರು 19-07 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಏತ ನೀರಾವರಿ ಯೋಜನೆಗೆ ಕೆ.ಆರ್‌.ಪೇಟೆಯಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲು ಈಗಾಗಲೆ ಸರ್ವೆ ಕಾರ್ಯ ಮಾಡಲಾಗಿದೆ. ಮೊದಲ ಹಂತಕ್ಕೆ 500 ಕೆ.ವಿ.ಎ. ಹಾಗೂ ಎರಡನೇ ಹಂತಕ್ಕೆ 250 ಕೆ.ವಿ.ಎ. ವಿದ್ಯುತ್‌ ಸಂಪರ್ಕದ ಅವಶ್ಯಕತೆ ಇದೆ. ಈ ಹಿಂದೆ ಇದಕ್ಕೆ 35 ಲಕ್ಷ ರೂ. ಅಂದಾಜುಪಟ್ಟಿ ಸಿದ್ಧಪಡಿಸಲಾಗಿತ್ತು.

Advertisement

ಮಳಲೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ 1998ರಲ್ಲಿ ದೊರೆತ ಬಳಿಕ 2000ನೇ ಸಾಲಿನಲ್ಲಿ ಶಂಕುಸ್ಥಾಪನೆಗೊಂಡು 2.52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿ ನಂತರ ಸ್ಥಗಿತಗೊಂಡಿತ್ತು. ಅಂದಿನ ಶಾಸಕ ಸಿ.ಆರ್‌.ಸಗೀರ್‌ ಅಹಮದ್‌ ಯೋಜನೆಗೆ ಹೆಚ್ಚುವರಿಯಾಗಿ 50 ಲಕ್ಷ ರೂ. ಬಿಡುಗಡೆ ಮಾಡಿಸಿದ ಪರಿಣಾಮ ಕಾಮಗಾರಿಯ ಜಾಕ್‌ವೆಲ್, ಇನ್‌ಟೇಕ್‌ವೆಲ್, ರೈಸಿಂಗ್‌ಮೇನ್‌, ಪಂಪ್‌ಹೌಸ್‌, ಪೈಪ್‌ ಅಳವಡಿಕೆ ಕಾಮಗಾರಿಗಳು ಪೂರ್ಣಗೊಂಡು 2ನೇ ಹಂತದ ಪೈಪ್‌ ಅಳವಡಿಕೆಯ ಕಾಮಗಾರಿ ಆರಂಭವಾಗಿತ್ತು.

ನಂತರದ ದಿನಗಳಲ್ಲಿ ಶಾಸಕ ಸಿ.ಟಿ.ರವಿ ಅಂದಿನ ನೀರಾವರಿ ಸಚಿವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯ ಅರಿವು ಮಾಡಿಕೊಡುವುದರ ಜೊತೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ಇನ್ನೇನು ಯೋಜನೆ ಪೂರ್ಣಗೊಳ್ಳುತ್ತದೆ ಎನ್ನುವಷ್ಟರಲ್ಲಿ ಹಲವು ರೀತಿಯ ರಾಜಕೀಯ ಬದಲಾವಣೆಗಳ ಪರಿಣಾಮ ಕಾಮಗಾರಿ ಪುನಃ ನನೆಗುದಿಗೆ ಬಿದ್ದಿತು.

ಪ್ರಮುಖವಾಗಿ ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದ ಮಳಲೂರು ಏತ ನೀರಾವರಿ ಸ್ಥಳ ಮೂಡಿಗೆರೆ ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು. ನಂತರ ಕಾಮಗಾರಿ ಮುಂದುವರೆಯದೆ ವಿಳಂಬಗೊಂಡಿತು.

ಚಿಕ್ಕಮಗಳೂರು ತಾಲೂಕಿನ ಮತ್ತಿಕೆರೆ ಗ್ರಾಮದ ಬಿರಂಜಿಹಳ್ಳದಿಂದ ಮಳಲೂರು ಮೂಲಕ ಮಳಲೂರು ಗ್ರಾಮದ ಹಳ್ಳಿಗಳ 1,480 ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದೆ. ಪ್ರಮುಖವಾಗಿ ಮಳಲೂರು, ಕಲ್ಲೇನಹಳ್ಳಿ, ಸಿರಿಗಾಪುರ, ಕಂಬಿಹಳ್ಳಿ, ಬಿಗ್ಗನಹಳ್ಳಿ, ಬಿಗ್ಗದೇವನಹಳ್ಳಿ, ಕದ್ರಿಮಿದ್ರಿ, ತಗಡೂರು, ಹಾದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ.

ರೈತರಿಂದ ವಿಳಂಬ: ಕಾಮಗಾರಿಗೆ ಅಗತ್ಯವಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತ ದರ ನಿಗದಿಪಡಿಸಿತ್ತು. ಇದಕ್ಕೆ ಕೆಲವು ರೈತರು ಒಪ್ಪಿಕೊಂಡಿದ್ದರಾದರೂ ಮತ್ತೆ ಕೆಲವರು ಹೆಚ್ಚಿನ ದರ ಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಇದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿತ್ತು. ದರ ನಿಗದಿಪಡಿಸುವ ಸಂಬಂಧ ಹಲವು ಬಾರಿ ರೈತರೊಂದಿಗೆ ಸಭೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಉಳಿದಿರುವ ಕಾಮಗಾರಿಗೆ 19-07 ಎಕರೆ ಜಮೀನು ಅವಶ್ಯವಿದೆ. ಒಟ್ಟಾರೆ 140 ರೈತರಿಂದ ಈ ಜಮೀನು ಪಡೆದುಕೊಳ್ಳಬೇಕಿದೆ. 71ರೈತರು ನೇರ ಖರೀದಿಗೆ ಒಪ್ಪಿಗೆ ಸೂಚಿಸಿದ್ದರಿಂದ 2018ರಲ್ಲಿ ಜಿಲ್ಲಾಡಳಿತ ಭೂಮಿಗೆ ದರ ನಿಗದಿಪಡಿಸಿ 3.24 ಕೋಟಿ ರೂ.ಗೆ ಕಾವೇರಿ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಉಳಿದ 69ರೈತರು ನೇರ ಖರೀದಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ಆ ರೈತರು ಸಹ ನೇರ ಖರೀದಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ಈ ಹಿಂದೆ ಜಿಲ್ಲಾಧಿಕಾರಿ ನಿಗದಿಪಡಿಸಿದ್ದ ಮಾರುಕಟ್ಟೆ ಬೆಲೆಗೂ ಈಗಿನ ಮಾರುಕಟ್ಟೆ ಬೆಲೆಗೂ ವ್ಯತ್ಯಾಸವಿರುವುದರಿಂದ ಈಗಿನ ಮಾರುಕಟ್ಟೆ ಬೆಲೆ ನಿಗದಿಪಡಿಸಿದಲ್ಲಿ ಭೂಮಿ ಕೊಡಲು ಸಿದ್ಧವೆಂದು ರೈತರು ಹೇಳಿದ್ದಾರೆ.

ಕಾಮಗಾರಿ ಆರಂಭ
ಕಾವೇರಿ ನೀರಾವರಿ ನಿಗಮ ಭೂಮಿ ನೇರ ಖರೀದಿ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದಲ್ಲಿ, ಜಿಲ್ಲಾಧಿಕಾರಿಗಳ ನೇತೃತ್ವದ ಬೆಲೆ ನಿಗದಿ ಸಮಿತಿ ಸಭೆ ಸೇರಿ ಈಗಿನ ಮಾರುಕಟ್ಟೆ ದರದಂತೆ ಭೂಮಿಗೆ ದರ ನಿಗದಿಪಡಿಸಲಿದೆ. ಆ ನಂತರ ಕಾವೇರಿ ನೀರಾವರಿ ನಿಗಮ ನೇರವಾಗಿ ರೈತರಿಂದ ಅಗತ್ಯವಿರುವ ಭೂಮಿ ಖರೀದಿಸಿ ಕಾಮಗಾರಿ ಆರಂಭಿಸಬಹುದಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next