Advertisement

ದೌರ್ಜನ್ಯಕ್ಕೀಡಾದ ಮಹಿಳೆ ನೋವಿಗೆ ಸ್ಪಂದಿಸಿ

02:58 PM Nov 14, 2019 | Naveen |

ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಜಿಲ್ಲಾ ಸಮನ್ವಯ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿವಾರಣೆ ಯೋಜನೆ, ಬಾಲ್ಯ ವಿವಾಹ ನಿಷೇಧ ಕಾನೂನು ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ವೈದ್ಯಕೀಯ ಚಿಕಿತ್ಸೆ, ಸಮಾಲೋಚನೆ, ಪೊಲೀಸ್‌ ಹಾಗೂ ಕಾನೂನಿನ ನೆರವನ್ನು ಒಂದೇ ಸೂರಿನಡಿ ನೀಡಲಾಗುತ್ತಿದೆ. ಈ ಘಟಕಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಉಚಿತ ಸಹಾಯವಾಣಿ ಸಂಖ್ಯೆ 181 ಆಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯದ 84 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 24 ಈಗಾಗಲೇ ಇತ್ಯರ್ಥಗೊಂಡಿವೆ. 45 ಪ್ರಕರಣಗಳು ನ್ಯಾಯಾಲಯದಲ್ಲಿ ಉಳಿದಿವೆ. 15 ಸಮಾಲೋಚನೆಗೆ ಇವೆ. ಇವುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಪ್ರಕರಣಗಳ ಅನುಪಾಲನೆಯನ್ನು ಮಾಡಿ ದೌರ್ಜನ್ಯಕ್ಕೊಳ್ಳಗಾದವರಿಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.

ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಗ್ರಾಮಗಳ ಮಟ್ಟದಲ್ಲಿ ಸಭೆಗಳನ್ನು ಮಾಡುವುದರೊಂದಿಗೆ ಸ್ಥಳೀಯ ಜನರು ಸೇರಿದಂತೆ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಇಂತಹ ಪ್ರಕರಣಗಳು ಕಂಡುಬಂದಾಗ ಏನು ಕ್ರಮ ಕೈಗೊಳ್ಳಬೇಕೆಂಬುದನ್ನು ತಿಳಿಸಬೇಕು ಎಂದು ಹೇಳಿದರು.

Advertisement

ಪ್ರಸ್ತುತ ಸಾಲಿನಲ್ಲಿ 23 ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿದ್ದು, ಅವುಗಳಲ್ಲಿ 19 ಪ್ರಕರಣಗಳನ್ನು ತಡೆಗಟ್ಟಲಾಗಿದೆ. 2 ಪ್ರಕರಣಗಳಲ್ಲಿ ಕಾನೂನು ಕ್ರಮ ಸಹ ತೆಗೆದುಕೊಳ್ಳಲಾಗಿದೆ. ಬಾಲ್ಯ ವಿವಾಹ ಸಮಾಜದಲ್ಲಿ ಅನಿಷ್ಠ ಪದ್ಧತಿಯಾಗಿದ್ದು, ಇದನ್ನು ತಪ್ಪಿಸಲು ಪ್ರತಿಯೊಬ್ಬರೂ ಮುಂದಾಗುವುದು ಒಳಿತು ಎಂದರು.

ಬಾಲ್ಯವಿವಾಹ ತಡೆಯುವ ಸಂಬಂಧ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಕಾರ್ಯನಿರ್ವಹಿಸುತ್ತಿದೆ. ಬಾಲ್ಯ ವಿವಾಹದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಸುಧಾರಣೆ, ವೇತನ ನಷ್ಟ ತುಂಬಿಕೊಡಲು ಜಿಲ್ಲೆಯಲ್ಲಿ 14,893 ಫಲಾನುಭವಿಗಳಿಗೆ 6.06 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದರು. ಮಾತೃ ವಂದನಾ ಯೋಜನೆಯಲ್ಲಿ ಯಾವುದೇ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಲು ಅಂಗನವಾಡಿ ಮಟ್ಟದಿಂದ ನೋಂದಣಿ ಮಾಡುವುದರೊಂದಿಗೆ ಪ್ರತಿಯೊಬ್ಬರನ್ನು ಫಲಾನುಭವಿಗಳನ್ನಾಗಿಸಬೇಕು ಎಂದರು.

ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕ ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಒನ್‌ ಸ್ಟಾಂಪ್‌ ಸೆಂಟರ್‌ (ಸಖೀ)ಜೊತೆಗೆ ಸಂಯೋಜನೆಗೊಳಿ ಸಲಾಗಿದೆ. ನೊಂದ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಬಿ. ಸುಂದ್ರೇಶ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ, ಮ್ಯಾನೇಜರ್‌ ಎನ್‌.ಪಿ.ದೇವಾನಂದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next