Advertisement

ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ನೆಮ್ಮದಿ ಜೀವನ: ಚೇಂಗಟಿ

11:29 AM Jul 29, 2019 | Naveen |

ಚಿಕ್ಕಮಗಳೂರು: ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸಲು ಮನಃಸ್ಥಿತಿ, ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಸವರಾಜ್‌ ಚೇಂಗಟಿ ಹೇಳಿದರು.

Advertisement

ನಗರದ ಐ.ಡಿ.ಎಸ್‌.ಜಿ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಕೇಂದ್ರ ಸಮಾಜ ಕಲ್ಯಾಣ ಮಂಡಳಿ, ಕಸ್ತೂರಿ ಬಾ ಸದನ, ಕೌಟುಂಬಿಕ ಸಲಹಾ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಐ.ಡಿ.ಎಸ್‌.ಜಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಕೌಟುಂಬಿಕ ವಿಚಾರದಲ್ಲಿ ನೆಮ್ಮದಿಯಿಂದ ಬದುಕಬೇಕು. ಉಜ್ವಲ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ನಮ್ಮನ್ನು ನಾವು ಪ್ರೀತಿಸಿದರೆ ಯಾವುದೇ ಕಠಿಣ ಸಮಸ್ಯೆ ಎದುರಾದರೂ ಧೈರ್ಯದಿಂದ ಎದುರಿಸಬಹುದು ಎಂದು ಹೇಳಿದರು.

ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದರ ಜತೆಗೆ ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡಬಾರದು. ಬೇರೆಯವರು ತಪ್ಪು ಮಾಡಿದಾಗ ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರನ್ನು ನೋಯಿಸುವ ಕೆಲಸ ಮಾಡದೆ, ಸಕಾರಾತ್ಮಕ ಆಲೋಚನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಧುನಿಕ ಯುಗದಲ್ಲಿ ಯುವಜನಾಂಗ ವ್ಯಾಟ್ಸಪ್‌, ಫೇಸ್ಬುಕ್‌, ಟ್ವೀಟರ್‌ಗೆ ಮಾರು ಹೋಗಿದ್ದು, ಅವುಗಳ ಬಳಕೆಯಿಂದ ದಾರಿ ತಪ್ಪುತ್ತಿದ್ದಾರೆ. ಇವುಗಳ ಬದಲು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಗುರು ಹಿರಿಯರಿಗೆ ಗೌರವಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಟಿ.ವೆಂಕಟಲಕ್ಷ್ಮೀ ಮಾತನಾಡಿ, ಪ್ರಸ್ತುತ ಇಂಟರ್ನೆಟ್ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ವಿಷಯಗಳನ್ನು ತಿಳಿದುಕೊಳ್ಳುತ್ತಿರುವುದು ಸಂತಸದ ವಿಚಾರ. ಆದರೆ ಕೆಲವೊಮ್ಮೆ ದುಡುಕಿ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ತಂದೆ-ತಾಯಿಗಳ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ತೊಡಗಿರುತ್ತಾರೆ. ಇದರಿಂದ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಮ್ಮ ಗುರಿ ತಲುಪಬಹುದು ಎಂದು ಹೇಳಿದರು.

Advertisement

ಜಗತ್ತಿನಲ್ಲಿ ಯಾವುದೇ ವಸ್ತುವನ್ನಾದರೂ ಕದಿಯಬಹುದು. ಆದರೆ ಜ್ಞಾನ-ವಿದ್ಯೆಯನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಅಂತಹ ಜ್ಞಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮಹಿಳೆಯರು ಕೂಡ ತಮ್ಮ ಜ್ಞಾನದಿಂದ ಅನೇಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವುದು ಶ್ಲಾಘನೀಯ ಎಂದರು.

ಕಸ್ತೂರಿ ಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 32 ವರ್ಷಗಳಿಂದ ಕೌಟುಂಬಿಕ ಸಲಹಾ ಕೇಂದ್ರ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಇದರಿಂದ ಸಾವಿರಾರು ಮಹಿಳೆಯರು ಹೆಚ್ಚಿನ ಸೌಲಭ್ಯ ಪಡೆದಿದ್ದಾರೆ. ಕೌಟುಂಬಿಕ ಸಲಹಾ ಕೇಂದ್ರದಲ್ಲಿ 2,811 ಪ್ರಕರಣಗಳು ದಾಖಲಿಸಿಕೊಂಡಿದ್ದು, ಇದರಲ್ಲಿ ಶೇ.88 ರಷ್ಟು ಪ್ರಕರಣಗಳನ್ನು ಕಾನೂನಾತ್ಮಕವಾಗಿ ಇತ್ಯರ್ಥಪಡಿಸಿ ಮಹಿಳೆಯರ ಏಳ್ಗೆಗೆ ಶ್ರಮಿಸುತ್ತಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮತ್ತು ವಕೀಲ ಕೆ.ಎನ್‌.ಚಂದ್ರಶೇಖರ್‌ ಮಕ್ಕಳ ಕಾಯ್ದೆಗಳು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆಯ ಬಗ್ಗೆ, ಡಿಸಿಆರ್‌ಬಿ ಇನ್ಸ್‌ಪೆಕ್ಟರ್‌ ವಿನೋದ್‌ ಭಟ್, ಮಹಿಳಾ ದೌರ್ಜನ್ಯ ಸೈಬರ್‌ ಕ್ರೈಂ ಬಗ್ಗೆ, ಮಾನಸಿಕ ತಜ್ಞೆ ಮಮತ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಮತ್ತು ಕುಟುಂಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಸುನಿತಾ ಪ್ರಭು ಮಹಿಳಾ ಸಬಲೀಕರಣದ ಬಗ್ಗೆ ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಮಂಡಳಿ ಕಾರ್ಯದರ್ಶಿ ನಿರ್ಮಲ ಚಾಲ್ಸ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌, ಪ್ರಾಂಶುಪಾಲ ಎಸ್‌.ಇ. ನಟರಾಜ್‌, ಕಸ್ತೂರಿ ಬಾ ಸದನದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next