ಆಲ್ದೂರು: ಜಲಮೇಲಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ತಪೋಭೂಮಿ ಶ್ರೀಆದಿಗುರು ಫಲಹಾರಸ್ವಾಮಿ ಮಠದ ಫಲಹಾರ್‌ದೊಡೆಯರ್ ನವಮಾಲಿಕಾ ವಿಶ್ರಾಂತಿಧಾಮದ ಉದ್ಘಾಟನೆ ಮತ್ತು ಕಾವಲುದೇವತೆ ಶ್ರೀಬಾಗಿಲಮ್ಮದೇವಿಯ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ಧರ್ಮ ಚಿಂತನಾ ಸಭೆ ಮೇ.20ರಂದು ನಡೆಯಲಿದೆ. ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಇಷ್ಟಲಿಂಗ ಪೂಜೆ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ ಈ ಧರ್ಮಚಿಂತನಾ ಸಭೆಯು ಫಲಹಾರಸ್ವಾಮಿ ಮಠದ ಆವರಣದಲ್ಲಿ ಜರುಗಲಿದೆ. ಹುಲಿಕೆರೆ ದೊಡ್ಡ ಮಠದ ವೀರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಮಠದ ಉತ್ತರಾಧಿಕಾರಿ ಮುರುಘೇಂದ್ರಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಬಿಂಡಿಗಾ ದೇವಿರಮ್ಮ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲೇಗೌಡ ಅಧ್ಯಕ್ಷತೆ ವಹಿಸುವರು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ದಿವಾಕರ್ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಬಿ. ದೇವಿರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುವರು. ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಭಾಗ ವಹಿಸಲಿದ್ದಾರೆ ಎಂದು ಮಠದ ಆಡಳಿತಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಸುಂದರ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಫಲಹಾರಸ್ವಾಮಿ ಮಠಕ್ಕೆ ಬಿಂಡಿಗಾ ನಾಡಿನ ಜನ, ಸುಡುಗಾಡು ಸಿದ್ಧರು, ಬೇಲೂರು ಗ್ರಾಮದವರು, ಗೊಲ್ಲರು, ಮರಾಠರು, ಅಜ್ಜಂಪುರ , ಜಾವಗಲ್ ಭಾಗದ ಭಕ್ತರು ಈ ಮಠದ ಭಕ್ತರಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜಾತಿ-ಭೇದವಿಲ್ಲದೆ ಎಲ್ಲಾ ಸಮುದಾಯದವರು ಈ ಮಠಕ್ಕೆ ಆಗಮಿಸುತ್ತಾರೆ.
ಈ ಮಠವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದು, ಮಠಕ್ಕೆ ಆಗಮಿಸುವ ಭಕ್ತರಿಗೆ ವಸತಿ ಹಾಗೂ ಪ್ರಸಾದದ ವ್ಯವಸ್ಥೆಯಾಗಬೇಕು ಎಂಬ ಮಹಾತ್ವಕಾಂಕ್ಷೆಯಿಂದ ಇಲ್ಲಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ವಿಶ್ರಾಂತಿಧಾಮ ನಿರ್ಮಿಸಲಾಗಿದೆ. ಬಡವ ಬಲ್ಲಿದರೆಂಬ ಬೇಧವಿಲ್ಲದೆ ಎಲ್ಲರೂ ಇಲ್ಲಿ ಆಗಮಿಸಿ ದೇವರ ದರ್ಶನ ಪಡೆಯಬಹುದು. ಯಾರಿಂದಲೂ ದೇಣಿಗೆ ಪಡೆಯದೆ ಭಕ್ತರ ಅನುಕೂಲಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಠದ ಉತ್ತರಾಧಿಕಾರಿ ಮುರುಘೇಂದ್ರಸ್ವಾಮೀಜಿ ತಿಳಿಸಿದ್ದಾರೆ.