ಚಿಕ್ಕಮಗಳೂರು: ಅತಿವೃಷ್ಟಿ ಹಾನಿಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೋವಿಡ್ ಸೋಂಕು ಲಸಿಕೆ ಸಮರ್ಪಕ ಪೂರೈಕೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಕೆ.ಪಿ. ಅಂಶುಮಂತ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ವಾತಾವರಣ ವೈಪರೀತ್ಯ ಹಾಗೂ ಅಕಾಲಿಕ ಮಳೆಯಿಂದ ಭೂ ಕುಸಿತ, ಮನೆಗಳ ಕುಸಿತ, ಕಾμ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಹಾನಿಗೆ ಒಳಗಾಗಿ ನೂರಾರು ಕೋಟಿ ರೂ. ನಷ್ಟ ಸಂಭವಿಸಿತ್ತು. ಬಯಲು ಸೀಮೆಯ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲಿ ರಾಗಿ, ಈರುಳ್ಳಿ, ಆಲೂಗಡ್ಡೆ, ಉದ್ದು ಬೆಳೆಗಳು ಹಾನಿಗೆ ಒಳಗಾಗಿ ನಷ್ಟ ಸಂಭವಿಸಿತ್ತು ಎಂದು ಸಚಿವರಿಗೆ ವಿವರಿಸಿದರು.
ಕಳೆದ ವರ್ಷದ ಅತಿವೃಷ್ಟಿ ಹಾನಿಗಳ ಸಮೀûಾ ಕಾರ್ಯ ನಡೆದಿದೆ. ಆದರೆ, ಮನೆ, ಬೆಳೆ, ತೋಟಗಳನ್ನು ಕಳೆದುಕೊಂಡವರಿಗೆ ಇಲ್ಲಿಯವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಜಿಲ್ಲೆಯ ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾಗಿರುವ ಭತ್ತ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿ ದೊಡ್ಡ ನಷ್ಟ ಸಂಭವಿಸಿತ್ತು. ಭತ್ತ ಬೆಳೆಯುವ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಬೆಳೆ ಪೂರ್ಣ ಹಾನಿಯಾಗಿತ್ತು. ಆದರೆ, ಬೆಳೆಗಳನ್ನು ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ದೊರತಿಲ್ಲ ಎಂದು ತಿಳಿಸಿದರು.
ಈ ಬಾರಿಯೂ ನಿರಂತರ ಮಳೆಯಾಗುತ್ತಿದ್ದು, ಕೆಲ ಕಡೆಗಳಲ್ಲಿ ಭೂಕುಸಿತ ಸಂಭವಿಸಿ ರಸ್ತೆ, ಮನೆಗಳು ಹಾನಿಗೆ ಒಳಗಾಗಿವೆ. ಬಯಲು ಸೀಮೆಯ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೆ ಒಳಗಾಗಿದೆ. ಆಲೂಗಡ್ಡೆ ಬೆಳೆಗೆ ಕೊಳೆ ರೋಗದ ಭೀತಿ ಎದುರಾಗಿದೆ. ತುರ್ತಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಸೋಂಕು ಜಿಲ್ಲೆಯಲ್ಲಿ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸೋಂಕಿನಿಂದ ಮರಣ ಹೊಂದಿರುವ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂ. ಗಳ ಪರಿಹಾರವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿರುವುದು ಸರಿ. ಆದರೆ, ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ, ನಿರೀಕ್ಷಿತ ಮಟ್ಟದಲ್ಲಿ ಕೋವಿಡ್ ಲಸಿಕೆ ಜಿಲ್ಲೆಯಲ್ಲಿ ಎಲ್ಲರಿಗೂ ಲಭವಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಜಿಪಂ ಮಾಜಿ ಸದಸ್ಯ ಸದಾಶಿವ ಇತರರು ಇದ್ದರು.