Advertisement

ಕಸಾಪ ಕನ್ನಡಿಗರ ಹೆಮ್ಮೆಯ ಸಂಕೇತ: ಕುಂದೂರು ಅಶೋಕ್‌

05:32 PM May 08, 2019 | Naveen |

ಚಿಕ್ಕಮಗಳೂರು: ಜಾತ್ಯತೀತವಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂದೂರು ಅಶೋಕ್‌ ತಿಳಿಸಿದರು.

Advertisement

ನಗರದ ಹಿರೇಮಗಳೂರು ವಾರ್ಡಿನ ಲಕ್ಷ್ಮೀಪುರದ ಗೌರೇಶ್ವರ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ. ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಸಾಹಿತ್ಯವನ್ನು ರಕ್ಷಿಸಿ ಬೆಳೆಸುವಲ್ಲಿ ಸಾಹಿತ್ಯ ಪರಿಷತ್‌ ಪ್ರಮುಖ ಪಾತ್ರ ವಹಿಸಿದೆ. ಭಾಷೆ ಮತ್ತು ಸಾಹಿತ್ಯ ನಮ್ಮೆಲ್ಲರನ್ನು ಮುಖಾಮುಖೀಯಾಗಿಸಿದೆ. ಒಗ್ಗೂಡಿಸುವ ಶಕ್ತಿಯನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಹೊಂದಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಬೆಳವಣಿಗೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ| ಬೆಳವಾಡಿ ಮಂಜುನಾಥ್‌, ವಿಶಾಲ ಕರ್ನಾಟಕದ ದೃಷ್ಟಿಕೋನದೊಂದಿಗೆ ಸಾಹಿತ್ಯ ಪರಿಷತ್‌ ಸ್ಥಾಪನೆಯಲ್ಲಿ ಖ್ಯಾತ ಇಂಜನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ, ಅಂದು ಮೈಸೂರು ಸಂಸ್ಥಾನದಲ್ಲಿ ರಾಜಪ್ರತಿನಿಧಿಯಾಗಿದ್ದ ಎಚ್.ವಿ.ನಂಜುಂಡಯ್ಯ ಅವರ ಪಾತ್ರ ಪ್ರಮುಖವಾದುದು. ಅವರು ಸ್ಥಾಪಿಸಿರುವ ಈ ಸಂಸ್ಥೆ ಇಂದು ಸಾಹಿತ್ಯ ಪ್ರಸಾರ ಸೇರಿದಂತೆ ನಾಡು-ನುಡಿಯ ಸೇವೆಯ ಮೂಲಕ ಜನರ ಸ್ವಾಭಿಮಾನದ ಸಂಕೇತವಾಗಿದೆ ಎಂದು ತಿಳಿಸಿದರು.

ಬಸವೇಶ್ವರರ ವಚನಗಳಲ್ಲಿ ಸಾಮಾಜಿಕ ಕಳಕಳಿ ಕುರಿತು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಬಸವೇಶ್ವರರು ಸಂಸ್ಕೃತವನ್ನು ತಿರಸ್ಕರಿಸಿ ಹೃದಯ ಭಾಷೆ ಕನ್ನಡದಲ್ಲಿ ವಚನ ಸಾಹಿತ್ಯದ ಮೂಲಕ ಕ್ರಾಂತಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಬಸವೇಶ್ವರರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸ್ಮರಣೆಯೊಂದಿಗೆ ಸಂಸ್ಥಾಪನಾ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕ್ಯಾತನಬೀಡು ರವೀಶ್‌ ಬಸಪ್ಪ ಮಾತನಾಡಿ, ಸಾಹಿತ್ಯವನ್ನು ಓದುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಜೊತೆಗೆ ಬದುಕು ಅರ್ಥಪೂರ್ಣವಾಗುತ್ತದೆ. ನಮ್ಮೊಳಗಿರುವ ಕೆಟ್ಟ ಆಲೋಚನೆಗಳನ್ನು ಹೊರ ದಬ್ಬಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಮಂಜುನಾಥಸ್ವಾಮಿ ಮಾತನಾಡಿ, ಭಾಷೆ ಮತ್ತು ಸಾಹಿತ್ಯ ಮನ ಅರಳಿಸುವುದರೊಂದಿಗೆ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಸ್ಟೇಟ್ಮನ್‌ ಆಗಿ ಹೊರಹೊಮ್ಮಲು ರಾಜ ಹೆದ್ದಾರಿಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಬಸವೇಶ್ವರರ ಜಯಂತಿ ಮೇ.7ರಂದು ನಡೆಯುವುದರಿಂದ ನಾವು ಈ ದಿನವೇ ಅವರ ವಿಚಾರವನ್ನು ಜನರಿಗೆ ತಿಳಿಸುವ ಉದ್ದೇಶ ಮತ್ತು ಪರಿಷತ್ತಿನ ಮಹತ್ವ ತಿಳಿಸಲು ಈ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ವಿವರಿಸಿದರು.

Advertisement

ಗ್ರಾಮದ ಹಿರಿಯರಾದ ಪ್ರಗತಿಪರ ಕೃಷಿಕ ಎಲ್.ವಿ.ಪುಪ್ಪೇಗೌಡ, ಎಲ್.ಎಂ.ಚಂದ್ರೇಗೌಡ ಅವರನ್ನು ಗೌರವಿಸಲಾಯಿತು. ಕಲ್ಯಾಣ ನಗರ ಸಾಹಿತ್ಯ ವೇದಿಕೆ ಅಧ್ಯಕ್ಷ ಲೋಕೇಶಪ್ಪ, ವಸ್ತಾರೆ ಹೋಬಳಿ ಕಸಾಪ ಅಧ್ಯಕ್ಷ ನಿಂಗೇಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎನ್‌.ಸುರೇಶ್‌, ಮುಖಂಡರಾದ ಮಹೇಶ್‌, ಈಶಣ್ಣ, ಶಶಿಕುಮಾರ್‌, ಲೋಕೇಶ್‌, ಕಲ್ಲೇಶ್‌, ಸಂತೋಷ್‌ ಇನ್ನಿತರರಿದ್ದರು. ಸ್ನೇಹಾ ಮತ್ತು ಸಹನಾ ಪ್ರಾರ್ಥಿಸಿದರು. ಮಂಜುನಾಥ್‌ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಎಚ್.ಎಸ್‌.ಜಗದೀಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next