ಚಿಕ್ಕಮಗಳೂರು: ಧಾರಾಕಾರ ಮಳೆಯಿಂದ ಉಂಟಾದ ಭೂ ಕುಸಿತದ ಪರಿಣಾಮ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಟವರ್‌ಗಳು ಕಾರ್ಯ ಸ್ಥಗಿತ ಗೊಳಿಸಿದ್ದು, ಅವುಗಳಿಗೆ ಮರು ಚಾಲನೆ ನೀಡುವ ಕೆಲಸವನ್ನು ಬಿರುಸಿನಿಂದ ಕೈಗೊಳ್ಳಲಾಗಿದೆ.
ಬಿಎಸ್‌ಎನ್‌ಎಲ್ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಎಲ್.ಶಿವಣ್ಣ, ಎಜಿಎಂ ಪ್ರಸನ್ನಕುಮಾರ್, ಮೊಬೈಲ್ ಎಸ್‌ಡಿಇ, ಗೋಪಾಲಕೃಷ್ಣ ಮತ್ತವರ ತಂಡ ಕಳೆದ 6 ದಿನಗಳಿಂದ ಮೂಡಿಗೆರೆ, ಕಳಸ, ಬಾಳೆಹೊನ್ನೂರು ಮತ್ತು ಇತರ ಭಾಗದಲ್ಲಿದ್ದು, ಸ್ವತಃ ಮೇಲುಸ್ತುವಾರಿ ವಹಿಸಿ ತೀವ್ರ ಹಾಳಾಗಿರುವ ಲೈನ್‌ಗಳನ್ನು ಮರು ಜೋಡಿಸುವ ಕೆಲಸ ಕೈಗೊಂಡಿದ್ದಾರೆ.
ಮಳೆ, ಪ್ರವಾಹ ಮತ್ತು ಭೂಕುಸಿತದ ಸಂದರ್ಭದಲ್ಲಿ 35 ಕಡೆಗಳಲ್ಲಿ ಓಎಫ್ಸಿ ಕೇಬಲ್ ಹಾನಿ ಸಂಭವಿಸಿದೆ. ವಿದ್ಯುತ್, ಡಿಸೇಲ್ ಕೊರತೆಯಿಂದ 200ಕ್ಕೂ ಹೆಚ್ಚು ಟವರ್ ಗಳು ಕಾರ್ಯ ನಿಲ್ಲಿಸಿದ್ದವು ಎಂದು ಡಿಜಿಎಂ ಶಿವಣ್ಣ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ಗೆ ವಿದ್ಯುತ್ ಸಂಪರ್ಕ ಅತ್ಯವಶ್ಯಕವಾಗಿದೆ. ಆದರೆ, ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿ ಸಂಭವಿಸಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಟವರ್‌ಗಳು ಕಾರ್ಯನಿರ್ವಹಿಸದಂತಾಗಿದೆ. ಮಲೆನಾಡು ಭಾಗದ ಜನರು ಬಿಎಸ್‌ಎನ್‌ಎಲ್ ಸಂಪರ್ಕ ಅಗತ್ಯವಾಗಿ ಬೇಕಿದೆ ಎಂದು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸಂಸ್ತೆಯು ಹಣಕಾಸಿನ ಸಮಸ್ಯೆ ಅನುಭವಿಸುತ್ತಿದೆ. ಆದರೂ, ಸಾಧ್ಯವಾದಷ್ಟು ಬೇಗನೆ ಸಂಪರ್ಕ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಿಎಸ್‌ಎನ್‌ಎಲ್ನ ಅಧಿಕಾರಿಗಳು, ನೌಕರರು ಮತ್ತು ಗುತ್ತಿಗೆ ನೌಕರರೆಲ್ಲರ ಅವಿರತ ಶ್ರಮ ಮತ್ತು ಸಹಕಾರದೊಂದಿಗೆ ಹಗಲಿರುಳು ಕಾರ್ಯ ನಿರ್ವಹಿಸಿ 4 ದಿನದಲ್ಲಿ ಬಹುತೇಕ ಮೊಬೈಲ್ ಸಂಪರ್ಕವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಓಎಫ್ಸಿ ಕೇಬಲ್ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಬಿಎಸ್‌ಎನ್‌ಎಲ್ನಲ್ಲಿ ಸುಮಾರು 7 ತಿಂಗಳಿನಿಂದ ಗುತ್ತಿಗೆ ನೌಕರರಿಗೆ ವೇತನ ನೀಡಲಾಗಿಲ್ಲ. ವಾಹನಗಳಿಗೆ, ಜನರೇಟರ್‌ಗೆ ಡಿಸೇಲ್ ಮತ್ತು ಅಧಿಕಾರಿಗಳು ಕೆಲಸ ಮಾಡಲು ಅಗತ್ಯವಾದ ಉಪಕರಣ ಖರೀದಿಗೆ ಮತ್ತು ಲೇಬರ್‌ಗಳ ವೆಚ್ಚ ಪಾವತಿಗೆ ಬಿಎಸ್‌ಎನ್‌ಎಲ್ನಿಂದ ಯಾವುದೇ ಹಣ ಬಿಡುಗಡೆಯಾಗದ ಈ ಸಂದರ್ಭದಲ್ಲೂ ಕೂಡ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಮ್ಮ ಸ್ವಂತ ಹಣ ಖರ್ಚು ಮಾಡುವ ಮೂಲಕ ಇಂತಹ ಕಠಿಣ ಸಂದರ್ಭದಲ್ಲಿ ಪೂರ್ಣ ಸಹಕಾರ ನೀಡಿ ಸೇವೆ ಕೊಡುತ್ತಿದ್ದಾರೆಂದು ತಿಳಿಸಿದ್ದಾರೆ.
ಓಎಫ್ಸಿ ಕೇಬಲ್, ಭೂಗತ ಕೇಬಲ್ ಹಾನಿ ಮತ್ತು ಟವರ್‌ಗಳ ತಾಂತ್ರಿಕ ತೊಂದರೆ ಯಿಂದಾಗಿ ಬಿಎಸ್‌ಎನ್‌ಎಲ್ಗೆ ಸುಮಾರು 51ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಇದರಿಂದ ಎಲ್ಲಾ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರವಾಗಿತ್ತು. ಜಿಲ್ಲಾಧಿಕಾರಿಗಳು ತಮ್ಮ ನೆರೆ ಪರಿಹಾರ ನಿಧಿಯಿಂದ ತಕ್ಷಣ 3,000 ಲೀ. ಡಿಸೇಲ್ ಬಿಡುಗಡೆ ಗೊಳಿಸಿರುವುದರಿಂದ ಸಾಕಷ್ಟು ಪ್ರದೇಶದಲ್ಲಿ ಸಂಪರ್ಕ ನೀಡಲು ಸಾಧ್ಯವಾಯಿತು.
•
ಶಿವಣ್ಣ, ಡಿಜಿಎಂ, ಬಿಎಸ್ಸೆನ್ನೆಲ್