Advertisement
ಮಂಗಳವಾರ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೆ ಎಂದೇ ಖ್ಯಾತಿ ಪಡೆದಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದ ಮಹಿಳೆ ಮತ್ತು ಪುರುಷರ ಸ್ಪರ್ಧೆಗಳು ಭಾಗವಹಿಸುವ ಮೂಲಕ ಕಬಡ್ಡಿ ಪಂದ್ಯಾವಳಿಗೆ ಕಳೆತಂದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಗೆಲುವಿಗಾಗಿ ನಡೆಸುತ್ತಿದ್ದ ಸೆಣಸಾಟದ ದೃಶ್ಯಗಳು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
Related Articles
Advertisement
ಪುಟಾಣಿಗಳ ಆಕರ್ಷಿಸಿದ ಭೂ ಸಾಹಸ ಕ್ರೀಡೆ: ಶತಮಾನೋತ್ಸವ ಕ್ರೀಡಾಂಗಣದಲ್ಲಿ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಆಯೋಜಿಸಿದ್ದ ಭೂ ಸಾಹಸ ಕ್ರೀಡೆಯಲ್ಲಿ ಪುಟಾಣಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಟೆರ್ರಾಲೈನ್ ಟ್ರಾವೆಲ್ (ಟಿಟಿ), ಹಗ್ಗದ ಮೇಲೆ ನಡಿಗೆ ಕ್ರೀಡೆಗಳಲ್ಲಿ ಯುವಕ ಯುವತಿಯರು ಸೊಂಟಕ್ಕೆ ಬೆಲ್ಟ್‌ಗಳನ್ನು ಕಟ್ಟಿಕೊಂಡು ಹಗ್ಗದಲ್ಲಿ ಜೋತುಬಿದ್ದು ಜಾರುತಿದ್ದ ದೃಶ್ಯಗಳು ಆಕರ್ಷಣೀಯವಾಗಿತ್ತು.
2 ರಿಂದ 5 ವರ್ಷದ ಪುಟಾಣಿಗಳು ಭಯವಿಲ್ಲದೆ ಹಗ್ಗದಲ್ಲಿ ಜಾರಿ ಎಂಜಾಯ್ ಮಾಡಿದರು. ಮಗುವೊಂದು ಹಗ್ಗದಲ್ಲಿ ಜಾರುತ್ತಾ ನೆರೆದಿದ್ದವರಿಗೆ ಹಾಯ್ ಹೇಳುತ್ತಿದಂತೆ ಜನರು ಚಪ್ಪಾಳೆ ತಟ್ಟಿ ಆಕೆಯನ್ನು ಸ್ವಾಗತಿಸಿ ಸಂಭ್ರಮಿಸಿದರು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ನಗರದ ಹೊರವಲಯದ ನೆಲ್ಲೂರು ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ಮಂಗಳವಾರದಿಂದ ಚಾಲನೆ ದೊರೆತಿದ್ದು, ಮಹಿಳೆಯರು, ಮಕ್ಕಳು, ಪುರುಷರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀರಿನಲ್ಲಿ ಎಂಜಾಯ್ ಮಾಡಿದರು.
ಸುತ್ತಮುತ್ತಲ ಗ್ರಾಮದ ಮಹಿಳೆಯರು ತಂಡೋಪ ತಂಡವಾಗಿ ಕೆರೆಯ ಬಳಿಗೆ ಬಂದು ಸುರಕ್ಷಿತ ಜಾಕೇಟ್ ಧರಿಸಿ ನುರಿತ ತರಬೇತಿದಾರರ ಮಾರ್ಗದರ್ಶನದಲ್ಲಿ ದೋಣಿ ಮುನ್ನಡೆಸಿದರು. ಸ್ಪೀಡ್ ಬೋಟ್‌ನಲ್ಲಿ ಕುಳಿತ ಯುವಕ, ಯುವತಿಯರು ಬೋಟ್ ನೀರಿನಲ್ಲಿ ವೇಗವಾಗಿ ಚಲಿಸುವಾಗ ಖುಷಿಪಟ್ಟು ಕೆ ಕೆ ಹಾಕಿದರೆ, ಮತ್ತೆ ಕೆಲವರು ಬೆದರಿ ಕಕ್ಕಾಬಿಕ್ಕಿಯಾದರು. ಸುರಕ್ಷಿತ ಜಾಕೆಟ್ ನೊಂದಿಗೆ ಬನಾನಾ ಬೋಟ್‌ನಲ್ಲಿ ಕೆರೆಯ ನಡುಗಡ್ಡೆಗೆ ಬೋಟ್ ಬಂದಾಗ ತರಬೇತಿದಾರರು ನೀರಿನಲ್ಲಿ ಬೀಳಿಸಿ ಮತ್ತೆ ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ದೃಶ್ಯ ಕಂಡು ಬಂದವು.
ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಶಾಂತಿ ನಿಕೇತನ ಚಿತ್ರಕಲಾ ವಿಶ್ವವಿದ್ಯಾಲಯದಿಂದ ಚಿತ್ರಕಲಾ ಶಿಬಿರ ಆಯೋಜಿಸಿದ್ದು, ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸಿದ ಕಲಾವಿದರ ಕುಂಚದಿಂದ ಅರಳುತ್ತಿರುವ ಕಲಾಕೃತಿಗಳು ನೋಡುಗರ ಗಮನ ಸೆಳೆದವು.
ಜಿಲ್ಲೆಯ ಕಲಾವಿದೆ ವಾಣಿ ಜಿಲ್ಲೆಯ ಕಾಫಿ ವೈಭವ, ದೇವಿರಮ್ಮ ಬೆಟ್ಟ ಹಾಗೂ ಜಿಲ್ಲೆಯ ನಿಸರ್ಗ ಸಂಪತನ್ನು ಚಿತ್ರದಲ್ಲಿ ಅನಾವರಣಗೊಳಿಸಿದ್ದರು. ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಿಕ್ಷಣ ವಿಭಾಗದ ಚಿತ್ರಕಲಾ ಶಿಕ್ಷಕ ರವಿಕುಮಾರ್ ಕುಂಚದಲ್ಲಿ ಜಿಲ್ಲೆಯ ಪ್ರಕೃತಿ ಸೌಂದರ್ಯ ಅರಳಿದ್ದು, ನೋಡುಗರನ್ನು ಸೆಳೆಯುತ್ತಿದೆ. ಕೇಂದ್ರ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ಪಶ್ಚಿಮ ಬಂಗಾಳದಿಂದ ಆಗಮಿಸಿರುವ ಜಯದೇವಬಾಲ, ಮುಂಬೈ ಭೀಮರಾವ್ ಚೌಟೆ, ಬೆಂಗಳೂರಿನ ಬಾಬು ಜಟ್ಕರ್ ಸೇರಿದಂತೆ ಅನೇಕ ಕಲಾವಿದರ ಕುಂಚದಲ್ಲಿ ಸುಂದರ ಕಲಾಕೃತಿಗಳ ನಿರ್ಮಾಣದಲ್ಲಿ ತೊಡಗಿದ್ದು ಉತ್ಸವಕ್ಕೆ ಇನ್ನಷ್ಟು ಮೆರಗು ತಂದಿದೆ.