Advertisement

ವಸತಿ ಶಾಲೆಗಳಲ್ಲಿ ಉತ್ತಮ ಆಹಾರ-ಶಿಕ್ಷಣ ನೀಡಿ

03:54 PM Jun 19, 2019 | Naveen |

ಚಿಕ್ಕಮಗಳೂರು: ವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೊರಾರ್ಜಿ ಶಾಲೆಗೆ ಹೆಚ್ಚಿನ ಬೇಡಿಕೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಈ ವರ್ಷ ಹೆಚ್ಚಿನ ಬೇಡಿಕೆ ಇದ್ದು, ಜಿಲ್ಲೆಗೆ ಮತ್ತಷ್ಟು ಮೊರಾರ್ಜಿ ಶಾಲೆಗಳನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಪೋಷಕರ ಸಭೆ ನಡೆಸಿ: ಶಿಕ್ಷಣ ಇಂದು ಪ್ರಪಂಚದ ಬಹುದೊಡ್ಡ ಶಕ್ತಿಯಾಗಿದೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಪೋಷಕರ ಸಭೆ ನಡೆಸುವುದರ ಜೊತೆಗೆ ವಸತಿ ಮೇಲ್ವಿಚಾರಕರು ಮತ್ತು ಪ್ರಾಂಶುಪಾಲರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ವೇತನ ನೀಡಿ: ಜಿಲ್ಲಾ ಪಂಚಾಯಿತಿ ಸದಸ್ಯ ಬೀಕನಹಳ್ಳಿ ಸೋಮಶೇಖರ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸರಿಯಾಗಿ ನೀಡಬೇಕು. ವಿದ್ಯಾರ್ಥಿಗಳು ಬ್ಯಾಂಕಿನಲ್ಲಿ ತಮ್ಮ ಖಾತೆ ತೆರೆಯುವಾಗ ಆಧಾರ್‌ ಕಾರ್ಡ್‌ ನೀಡಬೇಕು. ಇಲಾಖೆಯಿಂದ ನೀಡುವ ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.

Advertisement

ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಮೊರಾರ್ಜಿ ವಸತಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹೇರದೇ ಸರಿಯಾದ ಸಮಯಕ್ಕೆ ಪಾಠ ಪ್ರವಚನ ಮಾಡಿ ಸಂಸ್ಕಾರಯುತ ಶಿಕ್ಷಣ ನೀಡಬೇಕೆಂದು ತಿಳಿಸಿದರು.

ದೂರುಗಳ ಬಗ್ಗೆ ವರದಿ ನೀಡಿ: ಜಿಲ್ಲಾ ಪಂಚಾಯಿತಿ ಸದಸ್ಯ ಶರತ್‌ ಕೃಷ್ಣಮೂರ್ತಿ ಮಾತನಾಡಿ, ಪೋಸ್ಟ್‌ ಮೆಟ್ರಿಕ್‌ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಂದ ಛಾಪಾ ಕಾಗದ ಪಡೆಯುವುದರ ಜೊತೆಗೆ 200ರಿಂದ 300ರೂ. ಪಡೆಯುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ವರದಿ ನೀಡಬೇಕೆಂದರು ಸೂಚಿಸಿದರು.

ಶಿರವಾಸೆಯಲ್ಲಿ ಕಳೆದ ಸಾಲಿನಲ್ಲಿ ಕಲುಷಿತ ನೀರಿನಿಂದ ಮಕ್ಕಳಿಗೆ ಸಮಸ್ಯೆ ಆಗಿತ್ತು. ಶುದ್ಧವಾದ ನೀರನ್ನು ಎಲ್ಲಾ ವಸತಿ ನಿಲಯಗಳಲ್ಲೂ ನೀಡಬೇಕು. ಮಾತೃಪೂರ್ಣ ಯೋಜನೆಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು. ಅಂಗವಿಕಲರ ಅನುದಾನ ಬಳಕೆ ಮಾಡಿಲ್ಲ. ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅಮಿತಾ ಮುತ್ತಪ್ಪ ಮಾತನಾಡಿ, ಅಧಿಕಾರಿಗಳು ಸಭೆಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು. ಜಿಪಂ ಸದಸ್ಯರಾದ ದಿವ್ಯಾ ದಿನೇಶ್‌, ಲೋಲಾಕ್ಷಿಬಾಯಿ, ಉಪಕಾರ್ಯದರ್ಶಿ ರಾಜಗೋಪಾಲ್ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next