ಚಿಕ್ಕಮಗಳೂರು: ದತ್ತಪೀಠ ಯಾರಿಗೆ ಸೇರಿದ್ದೆಂದು ತೀರ್ಪು ಬಂದರೂ ಅದನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ದತ್ತಮಾಲಾ ಅಭಿಯಾನ ನಡೆಯುವ ದಿನಾಂಕ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಬೈಠಕ್‌ನಲ್ಲಿ ತೀರ್ಮಾನವಾಗಲಿದೆ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಹೇಳಿದರು.
ನಗರದ ರಾಮನಹಳ್ಳಿಯ ವಂದೇ ಮಾತರಂ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀರಾಮಸೇನೆ ಜಿಲ್ಲಾ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು. ದತ್ತಪೀಠಕ್ಕಾಗಿ ನಿರಂತರ ಹೋರಾಟ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ಹೋರಾಟವನ್ನು ಕೈಬಿಡುವುದಿಲ್ಲ ಎಂದರು.
ದತ್ತಮಾಲಾ ಅಭಿಯಾನ ನಡೆಯುವ ದಿನಾಂಕ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಬೈಠಕ್‌ನಲ್ಲಿ ತೀರ್ಮಾನವಾಗಲಿದೆ. ಅದಕ್ಕೂ ಮುನ್ನ ತಿಂಗಳಿಗೆ ಎರಡು ಮೂರು ಬಾರಿ ನಗರ ಮಟ್ಟದಲ್ಲಿ ಭಜನಾ ಕಾರ್ಯಕ್ರಮ, ದತ್ತಾತ್ರೇಯರ ಬಗ್ಗೆ ವಿಚಾರಗೋಷ್ಠಿ ನಡೆಸುವ ಮೂಲಕ ಜನತೆಯಲ್ಲಿ ದತ್ತಪೀಠ ಕುರಿತು ಜಾಗೃತಿ ಮೂಡಿಸಬೇಕು. ಬೆಳಗಾವಿಯ ಶಿವು ಉಪ್ಪಾರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖಾ ಸಂಸ್ಥೆಗೆ ವಹಿಸುವವರೆಗೂ ನಿರಂತರ ಚಳವಳಿ ನಡೆಸಲಿದ್ದು ಜು. 8 ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಿವು ಉಪ್ಪಾರ ಹೆಸರಿನಲ್ಲಿ ಜು. 4 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗೋ ಪೂಜೆ ಮಾಡಲಾಗುವುದು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜು. 8 ರಂದು ಬೆಳಗಾವಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಜಿಲ್ಲೆಗಳಿಂದ ಹೆಚ್ಚಿನ ಜನ ಆಗಮಿಸಲಿದ್ದಾರೆ ಎಂದು ಹೇಳಿದರು. ಶ್ರೀ ದುರ್ಗಾಸೇನೆಯ ಜಿಲ್ಲಾ ಸಂಚಾಲಕಿ ಶಾರದಮ್ಮ, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ, ಪ್ರೀತೇಶ್, ಅಭಿಲಾಷ್, ದಿಲೀಪ್ ಮತ್ತಿತರರಿದ್ದರು.