Advertisement
ಕೃಷಿ ಇಲಾಖೆ ಮೂಲಗಳ ಪ್ರಕಾರ ಕಳೆದ ವರ್ಷ ಮೇ ತಿಂಗಳ 3ನೇ ವಾರಕ್ಕೆ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ 5,897 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮೇ.14ರವರೆಗೆ ಕಳೆದ ವರ್ಷ 990 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆ ಆಗಿದ್ದರೆ, 1900 ಹೆಕ್ಟೇರ್‌ನಲ್ಲಿ ಹೆಸರು, 250 ಹೆಕ್ಟೇರ್‌ನಲ್ಲಿ ಉದ್ದು, ಅಲಸಂದೆ ಬಿತ್ತನೆಯಾಗಿ ಕೃಷಿ ಭೂಮಿ ಸಿದ್ಧಗೊಳಿಸುವ ಕಾರ್ಯ ಆರಂಭಗೊಂಡಿತ್ತು. ಕಬ್ಬು ಬೆಳೆಯುವವರು ಕೂಳೆ ಕಬ್ಬು ಬೆಳೆಯಲು ಮುಂದಾಗಿದ್ದರು.
Related Articles
Advertisement
ಕಳೆದ ವರ್ಷ ಹಾಗೂ ಈ ವರ್ಷದಲ್ಲಿ ಮೇ.14ರ ವರೆಗೆ ಬಂದಿರುವ ಮುಂಗಾರು ಪೂರ್ವ ಮಳೆ ವಿವರವನ್ನು ಹೋಲಿಸಿದರೆ ಈ ವರ್ಷ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಬಂದ ಮಳೆ ಪ್ರಮಾಣಕ್ಕಿಂತ ಈ ವರ್ಷ ಮಳೆ ತೀವ್ರವಾಗಿ ಕ್ಷೀಣಿಸಿರುವುದು ಕಂಡು ಬರುತ್ತದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮೇ.14ರ ವರೆಗೆ 139 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ ತಾಲೂಕಿನಲ್ಲಿ 203.7 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಶೇ.37 ರಷ್ಟು ಮಳೆ ಕೊರತೆ ಉಂಟಾಗಿದೆ.
ಸದಾ ಕ್ಷಾಮಕ್ಕೆ ತುತ್ತಾಗುವ ಕಡೂರು ತಾಲೂಕಿನಲ್ಲಿ 2019ರ ಮೇ.14ರ ವರೆಗೆ ಬಂದಿರುವ ಮಳೆ ಪ್ರಮಾಣ 75 ಮಿ.ಮೀ ಮಾತ್ರ. ಕಳೆದ ವರ್ಷ ಈ ಅವಧಿಯಲ್ಲಿ 134.9 ಮಿ.ಮೀ. ಮಳೆ ಬಂದಿತ್ತು. ಹಾಗಾಗಿ ಈ ವರ್ಷ ಈ ತಾಲೂಕು ಶೇ.42ರಷ್ಟು ಮಳೆ ಕೊರತೆಯನ್ನು ಅನುಭವಿಸಿದೆ.
ಹೆಚ್ಚಿನ ಬಯಲು ಭಾಗ ಹೊಂದಿರುವ ತರೀಕೆರೆ ತಾಲೂಕಿನಲ್ಲಿ 2019ರ ಮೇ.14ರ ವರೆಗೆ ಬಂದಿರುವ ಮಳೆ ಪ್ರಮಾಣ 73 ಮಿ.ಮೀ. ಮಾತ್ರ. ಕಳೆದ ವರ್ಷ ಈ ವೇಳೆಗೆ ಬಂದಿರುವ ಮಳೆ ಪ್ರಮಾಣ 132.7 ಮಿ.ಮೀ. ಹಾಗಾಗಿ ಈ ವರ್ಷ ಶೇ.48ರಷ್ಟು ಮಳೆ ಕೊರತೆಯಾಗಿದೆ.
ಮಲೆನಾಡು ತಾಲೂಕುಗಳಾದ ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿಗಳಲ್ಲೂ ಈ ವರ್ಷ ಮಳೆ ಕೊರತೆ ಕಂಡು ಬಂದಿದೆ. ಕೊಪ್ಪ ತಾಲೂಕಿನಲ್ಲಿ ಈ ವರ್ಷ ಮೇ.14ರ ವರೆಗೆ ಬಿದ್ದಿರುವ ಮಳೆ ಪ್ರಮಾಣ 135 ಮಿ.ಮೀ., ಕಳೆದ ವರ್ಷ ಈ ಅವಧಿಯಲ್ಲಿ 254.9 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಈವರೆಗೆ ಶೇ.50ರಷ್ಟು ಮಳೆ ಕೊರತೆಯಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ 2019ರ ಮೇ.14ರ ವರೆಗೆ ಬಂದ ಮಳೆ ಪ್ರಮಾಣ 143 ಮಿ.ಮೀ. ಆದರೆ 2018ರಲ್ಲಿ ಈ ಅವಧಿಯಲ್ಲಿ 243.3 ಮಿ.ಮೀ. ಮಳೆ ಬಂದಿತ್ತು. ಹಾಗಾಗಿ ಈ ವರ್ಷ ತಾಲೂಕು ಶೇ.46ರಷ್ಟು ಮಳೆ ಕೊರತೆ ಅನುಭವಿಸಿದೆ.
ನರಸಿಂಹರಾಜಪುರ ತಾಲೂಕು ಮೇ.14ರ ವರೆಗೆ ಪಡೆದ ಮಳೆ ಪ್ರಮಾಣ ಒಟ್ಟು 111 ಮಿ.ಮೀ., 2018ರಲ್ಲಿ ಇದೇ ಅವಧಿಯಲ್ಲಿ ತಾಲೂಕಿನಲ್ಲಿ ಬಿದ್ದ ಮಳೆ ಪ್ರಮಾಣ 210.5 ಮಿ.ಮೀ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈ ವರ್ಷ ಈ ಅವಧಿಯಲ್ಲಿ ಶೇ.54 ರಷ್ಟು ಮಳೆ ಕೊರತೆ ಕಂಡು ಬಂದಿದೆ.
ಮಳೆ ದೇವರು ಕಿಗ್ಗದ ಋಷ್ಯಶೃಂಗನನ್ನು ಹೊಂದಿರುವ ಶೃಂಗೇರಿ ತಾಲೂಕಿನಲ್ಲಿ ಮೇ.14ರ ವರೆಗೆ ಬಂದಿರುವ ಮಳೆ 127ಮಿ.ಮೀ. ಇದೇ ಅವಧಿಯಲ್ಲಿ 2018ರಲ್ಲಿ ಈ ತಾಲೂಕು ಪಡೆದಿದ್ದ ಮಳೆ ಪ್ರಮಾಣ 181 ಮಿ.ಮೀ. ಹಾಗಾಗಿ ಈ ವರ್ಷ ಈವರೆಗೆ ಶೇ.58ರಷ್ಟು ಮಳೆ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ 2019ರಲ್ಲಿ ಮೇ.14ರ ವರೆಗೆ ಒಟ್ಟು 112 ಮಿ.ಮೀ. ಸರಾಸರಿ ಮಳೆ ಬಂದಿದೆ. 2018ರಲ್ಲಿ ಈ ಪ್ರಮಾಣ ಸರಾಸರಿ 187.7 ಮಿ.ಮೀ. ಆಗಿತ್ತು. ಹೀಗಾಗಿ ಜಿಲ್ಲೆ ಈ ವರ್ಷ ಶೇ.46ರಷ್ಟು ಮಳೆ ಕೊರತೆಯನ್ನು ಈವರೆಗೂ ಅನುಭವಿಸಿದೆ. ಕಳೆದ ವರ್ಷಕ್ಕಿಂತ 75 ಮಿ.ಮೀ. ಒಟ್ಟು ಮಳೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜಿಲ್ಲೆಯ ಬಯಲು ತಾಲೂಕುಗಳಲ್ಲಿ ಕೆರೆಕಟ್ಟೆಗಳು ಖಾಲಿಯಾಗಿವೆ. ಬಿತ್ತನೆಯ ಚಟುವಟಿಕೆ ಹಾಗೂ ಕೃಷಿ ಆರಂಭ ಮಂಕಾಗಿದೆ. ಮುಂಗಾರು ಮಳೆ ಬರುವುದು ವಿಳಂಬವಾದಷ್ಟು ಪರಿಸ್ಥಿತಿ ಮತ್ತಷ್ಟು ತೀವ್ರವಾಗಲಿದೆ. ಜೂ.6 ರಂದು ಕೇರಳವನ್ನು ಬಂದು ಮುಟ್ಟುವ ಮುಂಗಾರು ಮಳೆ ಜಿಲ್ಲೆಗೆ ಬರಲು ಕನಿಷ್ಠ 6 ರಿಂದ 8 ದಿನವಾದರೂ ಬೇಕು. ಅಷ್ಟರೊಳಗೆ ಒಂದು ಹದ ಮಳೆ ಬಂದರೆ ಬಯಲು ಸೀಮೆಯಲ್ಲಿ ಕೃಷಿ ಚಟುವಟಿಕೆ ಸ್ವಲ್ಪಮಟ್ಟಿನ ಚುರುಕು ಪಡೆಯಬಹುದು ಎಂದು ರೈತರು ತಿಳಿಸಿದ್ದಾರೆ.