Advertisement

ಸಾವಿತ್ರಿಬಾಯಿ ದೇಶದ ಪ್ರಥಮ ಶಿಕ್ಷಕಿ

07:46 PM Jan 05, 2020 | Naveen |

ಚಿಕ್ಕಮಗಳೂರು: ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರು ದೇಶದ ಪ್ರಥಮ ಶಿಕ್ಷಕಿ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

Advertisement

ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರ ಸಮಿತಿ ಹಾಗೂ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 200ವರ್ಷದ ಹಿಂದೆ ಮಹಿಳೆಯರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ಅವರು ತನ್ನ ಪತ್ನಿ ಸಾವಿತ್ರಿ ಅವರಿಗೆ ತಾವೇ ಅಕ್ಷರ ಕಲಿಸಿ, ಶಿಕ್ಷಕರ ತರಬೇತಿ ಕೊಡಿಸಿ ಆಕೆಯ ಮೂಲಕ ಮಹಿಳೆಯರಿಗೆ ಅಕ್ಷರ ಕಲಿಸುವ ಮಹತ್ವದ ಕಾರ್ಯಕ್ಕೆ ಮುಂದಾದರು ಎಂದು ತಿಳಿಸಿದರು.

ಮನುವಾದಿಗಳ ಪಿತೂರಿಯಿಂದ ದೇಶದ ಮೂಲ ನಿವಾಸಿಗಳಾದ ಶೂದ್ರರು, ಹಿಂದುಳಿದವರು ಹಾಗೂ ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡಲಾಗಿತ್ತು. ಮನುವಾದಿಗಳೆಂದರೆ ಕೇವಲ ಆರ್‌ಎಸ್‌ ಎಸ್‌, ಬಿಜೆಪಿ, ಭಜರಂಗದಳದ ಪರಿವಾರವಷ್ಟೇ ಅಲ್ಲ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಹೈಕಮಾಂಡ್‌ಗಳು ಮನುವಾದಿ ಮನಸ್ಥಿತಿಯನ್ನೇ ಹೊಂದಿವೆ. ಸತ್ಯವನ್ನು ಮರೆಮಾಚಿ ಸುಳ್ಳಿನ ಪಿತೂರಿ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಕ್ಷರದ ಅರಿವನ್ನು ಮಹಿಳೆಯರಿಗೆ ನೀಡಿದ ಸಾವಿತ್ರಿಬಾಯಿ ಫುಲೆ, ಹೆಣ್ಣುಮಕ್ಕಳಿಗೆ ಉಸಿರಾದವರೆಂದು ಬಣ್ಣಿಸಿದರು.

ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿಯಂತಹ ಅನಿಷ್ಠಗಳ
ವಿರುದ್ಧ ಹೋರಾಡಿದವರು. ಬುದ್ಧ, ಬಸವ, ಅಂಬೇಡ್ಕರ್‌ ಮತ್ತಿತರರ ಚಿಂತನೆಗಳಿಂದ ಪ್ರೇರಣೆ ಪಡೆದ ಫುಲೆ ದಂಪತಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಮಹಿಳೆಯರ ಸಾಮರ್ಥ್ಯವನ್ನು ಅಂದೇ ಅವರು ಅರ್ಥ ಮಾಡಿಕೊಂಡಿದ್ದರು. ಮಾಯಾವತಿ ದೇಶದ ಪ್ರಧಾನಿಯಾದರೆ ಮಾತ್ರ ಸರ್ವರಿಗೂ ಸಮಾನ ಅವಕಾಶಗಳು ಸಿಗುತ್ತವೆ ಎಂದರು.

Advertisement

ಪ್ರಧಾನ ಉಪನ್ಯಾಸ ನೀಡಿದ ಬಿಎಸ್‌ಪಿ ವಿಭಾಗೀಯ ಉಸ್ತುವಾರಿ ಹಿರಿಯ ವಕೀಲ ಪಿ.ಪರಮೇಶ್‌, ಸಾವಿತ್ರಿಬಾಯಿ ಫುಲೆ ಬಹುಜನರ ಭಾಗ್ಯವಿಧಾತೆ. ಮಹಾರಾಷ್ಟ್ರದ ಸತಾರ್‌ ಜಿಲ್ಲೆಯ ನೈಗಾಂನ್‌ ಗ್ರಾಮದಲ್ಲಿ 1831ರ ಜನವರಿ 3ರಂದು ಹೂವಾಡಿಗರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. 8ನೇ ವಯಸ್ಸಿಗೆ 13ನೇ ವಯಸ್ಸಿನ
ಜ್ಯೋತಿಬಾ ಫುಲೆ ಅವರೊಂದಿಗೆ ವಿವಾಹ ನೆರವೇರಿತು. ಬಾಲ್ಯ ವಿವಾಹ ಮಾಡಿಕೊಂಡ ದಂಪತಿ ಮುಂದೆ ಬಾಲ್ಯವಿವಾಹದ ವಿರುದ್ಧ ಜನಜಾಗೃತಿ ಮೂಡಿಸಿದವರು ಎಂದು ತಿಳಿಸಿದರು.

ಬ್ರಿಟಿಸ್‌ ಸರ್ಕಾರ ಇಂಡಿಯಾಸ್‌ ಫಸ್ಟ್‌ ಲೇಡಿ ಟೀಚರ್‌ ಎಂಬ ಬಿರುದನ್ನು ಸಾವಿತ್ರಿ ಅವರ ಸಾಧನೆ ಪರಿಗಣಿಸಿ ನೀಡಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರಿಗೆ ಮಾತ್ರ ವಿದ್ಯೆ ಸೀಮಿತವಾಗಿತ್ತು. ಅದರಲ್ಲೂ ಬ್ರಾಹ್ಮಣರಿಗೆ ಮಾತ್ರ ವಿದ್ಯೆ ಕಲಿಸುವ ಅಧಿಕಾರವಿತ್ತು. ಇಂತಹ ಸಂದರ್ಭದಲ್ಲಿ ಹಿಂದುಳಿದ ವರ್ಗದಿಂದ ಬಂದ ಜ್ಯೋತಿಬಾ ಫುಲೆ ಅವರು ದಲಿತರು ಸೇರಿದಂತೆ ಶೋಷಿತರು, ಮಹಿಳೆಯರಿಗೆ ಶಿಕ್ಷಣ ಕೊಡುವ ಸಂಕಲ್ಪ ಮಾಡಿ ತಮ್ಮ ಪತ್ನಿಯನ್ನೇ ಶಿಕ್ಷಕಿಯಾಗಿಸಿದವರೆಂದು ಹೇಳಿದರು.

ಮಹಾರಾಷ್ಟ್ರ ರಾಜ್ಯವೇ ಮಹಾರ್‌ ರಾಜ್ಯ. ಇಲ್ಲಿ ಸಮಾಜ ಪರಿವರ್ತನೆಗೆ ತೊಡಗಿಸಿಕೊಂಡ ಹಲವರು ಉದಯಿಸಿದ್ದಾರೆ. ಸ್ವಾತಂತ್ರ್ಯ ನಂತರ ಸಾವಿತ್ರಿ ಅವರ ಕೊಡುಗೆಯನ್ನು ದೇಶ ಮರೆತಿತ್ತು. ಬಿಎಸ್‌ಪಿ ಚಳವಳಿ ಇದನ್ನು ನೆನಪಿಸಿ ಮೊದಲ ಶಿಕ್ಷಕಿಯ ಜನ್ಮದಿನವನ್ನು ದೇಶಾದ್ಯಂತ ಆಚರಿಸಿಕೊಂಡು ಬಂದಿದೆ.

ಬಾರಿ ಕರ್ನಾಟಕ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಜನ್ಮದಿನ ಆಚರಿಸಲು ಸುತ್ತೋಲೆ ಹೊರಡಿಸಿದೆ. ಕನ್ನಡದಲ್ಲಿ ತಾರಾ ಅಭಿನಯದೊಂದಿಗೆ ಸಾವಿತ್ರಿಬಾಯಿ ಫುಲೆ ಅವರ ಜೀವನಾಧರಿತ ಚಲನಚಿತ್ರ ಬಂದಿತ್ತು ಎಂದರು. ಬಿಎಸ್‌ಪಿ ಕಚೇರಿ ಕಾರ್ಯದರ್ಶಿ ಗಂಗಾಧರ, ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ, ಕಾರ್ಯದರ್ಶಿ ಸವಿತಾ ಬ್ಯಾಪಿಸ್ಟಾ, ಜೆಡಿಎಸ್‌ ಮುಖಂಡ ಹುಣಸೆಮಕ್ಕಿ ಲಕ್ಷ್ಮಣ, ಗುಣವತಿ, ವಿದ್ಯಾರ್ಥಿ ಮುಖಂಡ ಪ್ರದೀಪ್‌ ಮತ್ತಿತರರು ಮಾತನಾಡಿದರು.

ಬಿಎಸ್‌ಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತಕುಮಾರ್‌ ಸ್ವಾಗತಿಸಿ, ನಿರೂಪಿಸಿದರೆ, ಮಂಜುಳಾ ವಂದಿಸಿದರು. ಮುಖಂಡರಾದ ಹೊನ್ನಪ್ಪ, ಮಂಜುನಾಥ್‌, ಲತಾ, ಕಲಾವತಿ ಮತ್ತಿತರರ ನೇತೃತ್ವದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next