ಯಡ್ರಾಮಿ: ಪಟ್ಟಣದ ಹೊರವಲಯದಲ್ಲಿರುವ ಚಿಗರಳ್ಳಿಗೆ ಹೋಗುವ ಮುಖ್ಯ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಕ್ಯಾನಲ್ ಗೆ ಕೂಲಿ ಕಾರ್ಮಿಕರ ಹೊತ್ತೊಯ್ಯುತ್ತಿದ್ದ ಟಂ ಟಂ ವಾಹನ ಕಾಲುವೆಗೆ ಬಿದ್ದು ಪಟ್ಟಣದ ಬಾಲಕ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಯಡ್ರಾಮಿ ನಿವಾಸಿ, ಬಿಸಿಲು ನಾಡಿನ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಫೀವುಲ್ಲಾ ದಖನಿ ಅವರ ಕಿರಿಯ ಪುತ್ರ ಆದೀಲಷಾಹಿ (14) ದುರ್ಮರಣಕ್ಕೀಡಾದ ಬಾಲಕ.
ರವಿವಾರ ಶಾಲೆಗೆ ರಜೆ ಇದ್ದ ಕಾರಣ ಓಣಿಯಲ್ಲಿನ ಮಹಿಳೆಯರ ಜತೆಗೆ ಹತ್ತಿ ಬಿಡಿಸಲು ಹೋಗಿದ್ದಾನೆ. ಹತ್ತಿ ಬಿಡಿಸಿಕೊಂಡು 8 ಜನ ಕೂಲಿ ಮಹಿಳೆಯರ ಜತೆಗೆ ಬಾಲಕ ಆದಿಲ್ ಷಾಹಿ ಟಂ ಟಂ ವಾಹನದಲ್ಲಿ ಕುಳಿತಿದ್ದಾನೆ. ನಾಲ್ಕೈದು ಹತ್ತಿ ತುಂಬಿದ ಚೀಲಗಳುನ್ನು ಹೊತ್ತು ಮನೆಗೆ ತರುತ್ತಿರುವ ಟಂ ಟಂ ರವಿವಾರ ಸಾಯಂಕಾಲ ಪಲ್ಟಿಯಾಗಿ ಪಕ್ಕದಲ್ಲಿರುವ ಕಾಲುವೆಗೆ ಬಿದ್ದಿದೆ. ಅದೇ ದಾರಿಯಲ್ಲಿ ಹೋಗುತ್ತಿರುವ ಕಬ್ಬಿನ ಟ್ರ್ಯಾಕ್ಟರ್ ಚಾಲಕರ ಸಮಯಪ್ರಜ್ಞೆಯಿಂದ ತಮ್ಮಲ್ಲಿರುವ, ಕಬ್ಬಿಗೆ ಬಿಗಿಯುವ ಹಗ್ಗಗಳನ್ನು ತಕ್ಷಣ ಕಾಲುವೆಗೆ ಎಸೆದು 8ಜನ ಕೂಲಿ ಮಹಿಳೆಯರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ: ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ : ಶಾಸಕ ದಾಜಿ ಸಾಲ್ಕರ್
ಆದರೆ ದುರ್ದೈವಿ ಆದಿಲ್ ಷಾಹಿ ನೀರಲ್ಲಿ ಬಿದ್ದ ನಂತರ ಮುಳುಗಿದವ ಮೇಲೆ ಏಳಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರವಿವಾರ ಸಂಜೆಯಿಂದಲೇ ಬಾಲಕನ ಪತ್ತೆಗಾಗಿ ಕಾಲುವೆಗೆ ಇಳಿದ ಯುವಕರ ತಂಡ ರಾತ್ರಿಯಿಡೀ ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಮೃತ ಬಾಲಕನ ದೇಹ ಪತ್ತೆಯಾಗಿದೆ.