ಚಿಕ್ಕಮಗಳೂರು: ಜಿಲ್ಲೆಯ ವಸತಿ ರಹಿತರಿಗೆ ನಿವೇಶನ ಮತ್ತು ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದಿಂದ ಎಂಜಿ ರಸ್ತೆ ಮೂಲಕ ಮೆರವಣಿಗೆಯಲ್ಲಿ ಬಂದ ಮಹಿಳೆಯರು ಸೇರಿದಂತೆ ಹಲವಾರು ಕಾರ್ಯಕರ್ತರು, ಆಜಾದ್ ಪಾರ್ಕ್‌ನಲ್ಲಿ ಧರಣಿ ನಡೆಸಿದರು.
ಈ ವೇಳೆ ಭೂಮಿ, ನಿವೇಶನ ನೀಡುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಆದರೆ, ಸಹಸ್ರಾರು ಸಂಖ್ಯೆಯ ಬಡವರು ನಿವೇಶನ, ಮನೆ ಇಲ್ಲದೆ ನಿರ್ಗತಿಕರಾಗಿದ್ದಾರೆ.
ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಬಲಾಡ್ಯರ ಒತ್ತುವರಿ ಭೂಮಿಯನ್ನು ತೆರವು ಮಾಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು. ದಲಿತರಿಂದ ಬಲಾಡ್ಯರು ಕಬಳಸಿರುವ ಭೂಮಿಯನ್ನು ಅವರಿಗೆ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ಬಡವರಿಗೆ ಭೂಮಿ ಮತ್ತು ವಸತಿ ಕಲ್ಪಿಸಲು ರಾಜ್ಯ ಮಟ್ಟದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಆಗಿದೆ. ಭೂ, ವಸತಿ ರಹಿತರಿಗೆ ಭೂಮಿ ನೀಡಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಸಮಿತಿ ತೀರ್ಮಾನಿಸಿದೆ. ಈಗ ಬಂದಿರುವ ಹೊಸ ಸರ್ಕಾರಕ್ಕೂ ಈ ಸಮಿತಿಯ ಶಿಫಾರಸ್ಸು ಮನದಟ್ಟು ಮಾಡಲಾಗಿದೆ. ಆದರೆ, ಈವರೆಗೂ ಯಾರೊಬ್ಬರಿಗೂ ವಸತಿ, ನಿವೇಶನ ನೀಡಲಿಲ್ಲ ಎಂದು ಆರೋಪಿಸಿದರು.
ಆಲ್ದೂರು ಹೋಬಳಿ ಸತ್ತಿಹಳ್ಳಿ ಸರ್ವೆ ನಂಬರ್ 81ರಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಿಗೆ ಹಕ್ಕುಪತ್ರ ಹಾಗೂ ಭೂ ಮಂಜೂರಾತಿ ನೀಡಬೇಕು. ಲಕ್ಯಾ ಹೋಬಳಿ ಲಕ್ಕಮ್ಮನಹಳ್ಳಿ ಹಾಗೂ ಆವತಿ ಹೋಬಳಿ ದಾನಿಹಳ್ಳಿ ಭೂರಹಿತರಿಗೆ ಭೂ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮೂಡಿಗೆರೆ ತಾಲೂಕಿನ ಸಂಸ್ಥೆ, ಕೆಳಗೂರು, ಕುಂದೂರು, ನಾಗನಮಕ್ಕಿ, ಕೊಪ್ಪ ತಾಲೂಕಿನ ಹೊಸಕೊಪ್ಪ, ಜಯಪುರ, ಕಡೂರು ಕಸಬಾ ಹೋಬಳಿಯಲ್ಲಿ ದಲಿತರಿಗೆ ಕೂಡಲೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುಮಾರ್ ಸಮತಳ, ರಾಜರತ್ನಂ, ನಾಗರಾಜು, ಕೌಳಿರಾಮು, ಕೃಷ್ಣಮೂರ್ತಿ, ಗಣೇಶ್, ಗೌಸ್ ಮೊಯುದ್ದೀನ್, ವಸಂತಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.